ವಿಜಯಪಥ ಸಮಗ್ರ ಸುದ್ದಿ
ಶಿವಮೊಗ್ಗ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಗೊತ್ತಿಲ್ಲ. ಆದರೆ, ಶಿಲ್ಪಾ ನಾಗ್ ಅವರು ಒಳ್ಳೆಯ ಐಎಎಸ್ ಅಧಿಕಾರಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ರೋಹಿಣಿ ಸಿಂಧೂರಿ ಅವರು ಕೆಲಸ ಮಾಡಿಲ್ಲ. ಆದರೆ, ಶಿಲ್ಪಾ ನಾಗ್ ಅವರು ಕೆಲಸ ಮಾಡಿದ್ದಾರೆ. ಕೇರಳದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆಗೆ ಹೋಗಿದ್ದೆವು. ಆಗ ನಮ್ಮ ಇಲಾಖೆಯಲ್ಲಿ ಶಿಲ್ಪಾ ನಾಗ್ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು.
ಕೋವಿಡ್ ನಿರ್ವಹಣೆ ಬಗ್ಗೆ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಬಹಳ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ, ಈ ಬಗ್ಗೆ ಯಾವ ಗೊಂದಲ ಕೂಡ ಇಲ್ಲ, ಮೈಸೂರಿನ ಜಿಲ್ಲಾಧಿಕಾರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಮಧ್ಯೆ ಭಿನ್ನಾಭಿಪ್ರಾಯ-ಗೊಂದಲವುಂಟಾಗಿದ್ದು, ಬಹಿರಂಗವಾಗಿ ಈ ಬೆಳವಣಿಗೆಯಾಗಿರುವುದು ನಿಜಕ್ಕೂ ಒಳ್ಳೆಯದಲ್ಲ ಎಂದು ಹೇಳಿದರು.
ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಮಾಡಲಾಗುತ್ತದೆ, ಅಲ್ಲಿ ಬಗೆಹರಿಯದಿದ್ದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದರು.
ಕ್ಯಾಬಿನೆಟ್ ಸಭೆಗೆ ದಿನಾಂಕ ನಿಗದಿಯಾಗಿಲ್ಲ. ಅಷ್ಟರೊಳಗೆ ಗೊಂದಲ ಬಗೆಹರಿಯದಿದ್ದರೆ, ಖಂಡಿತ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು. ಯಾವುದೇ ಅಧಿಕಾರಿಗಳು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸುವುದು, ಚರ್ಚೆಗಿಳಿಯುವುದು ಸರಿಯಲ್ಲ. ಕೋವಿಡ್ ನಿರ್ವಹಣೆಯನ್ನು ಮೊದಲು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ರೋಹಿಣಿ ಸಿಂಧೂರಿ ಅವರ ವಿರುದ್ಧ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳೂ ಆರೋಪ ಮಾಡುತ್ತಿದ್ದಾರೆ. ಅಲ್ಲದೇ, ಅಧಿಕಾರಿಗಳು, ಪಾಲಿಕೆ ಸದಸ್ಯರೂ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆ ಹೇಗೆ ನಡೆಯಿತು, ಯಾಕೆ ನಡೆಯಿತು, ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸುವಷ್ಟರ ಮಟ್ಟಿಗೆ ಏನಾಯಿತು ಎಂದು ಗೊತ್ತಿಲ್ಲ, ಮುಖ್ಯ ಕಾರ್ಯದರ್ಶಿಗಳು ನಿನ್ನೆ ಹೋಗಿ ಮಾಹಿತಿ ಪಡೆದುಕೊಂಡು ಮಾಡಿದ್ದಾರೆ, ಅವರು ನೀಡುವ ವರದಿ ಆಧರಿಸಿ ಸಿಎಂ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ಹೇಳಿದರು.