ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಸೆಪ್ಟಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳ ಅರ್ಧ ಅರ್ಧ ವೇತನ ನವೆಂಬರ್ 24ನೇ ತಾರೀಖು ಬಂದರೂ ಇನ್ನೂ ಬಿಡುಗಡೆಯಾಗಿಲ್ಲ.
ಕೆಳೆದ ಇದೇ ನವೆಂಬರ್ 2ರಂದು ಅಕ್ಟೋಬರ್ ತಿಂಗಳಿನ ಅರ್ಧವೇತನವನ್ನು ನೀಡಿದ್ದು, ಉಳಿದರ್ಧ ವೇತನವನ್ನು ಇನ್ನೂ ಬಡುಗಡೆ ಮಾಡಿಲ್ಲ. ಇದರಿಂದ ನೌಕರರು ದುಡಿದರೂ ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಕ್ಟೋಬರ್ 5ರ ನಂತರ ಆಗಸ್ಟ್ ತಿಂಗಳ ಅರ್ಧ ವೇತನವನ್ನು ಸಂಸ್ಥೆ ನೀಡಿತ್ತು. ಈ ವೇಳೆ ಸಚಿವ ಶ್ರೀರಾಮುಲು ಅವರು ದಸರಾ ಹಬ್ಬದ ಒಳಗಾಗಿ ನೌಕರರಿಗೆ ಸೆಪ್ಟೆಂಬರ್ ತಿಂಗಳ ಪೂರ್ತಿ ವೇತನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ದಸರಾ ಹಬ್ಬವೂ ಮುಗಿದು ವಾರಗಳು ಉರುಳುತ್ತಿದ್ದರೂ ಈವರೆಗೂ ಸೆಪ್ಟೆಂಬರ್ ತಿಂಗಳಿನ ಅರ್ಧ ವೇತನ ಮಾತ್ರ ಬಿಡುಗಡೆಯಾಗಿಲ್ಲ. ಜತೆಗೆ ಅಕ್ಟೋಬರ್ ತಿಂಗಳಿನ ಅರ್ಧ ವೇತನವು ನೌಕರರ ಕೈ ಗೆ ಇನ್ನು ಸೇರಿಲ್ಲ.
ಹೀಗೆಯೆ ಜುಲೈನಲ್ಲಿ ವೇತನ ನೀಡದಿದ್ದರಿಂದ ನೌಕರರು ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ತೊಂದರೆ ಅನುಭವಿಸಬೇಕಾಯಿತು. ನಂತರ ಸಚಿವರು ಗಣೇಶ ಹಬ್ಬಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್ ಈ ಎರಡೂ ತಿಂಗಳುಗಳ ವೇತನವನ್ನು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿದ್ದರು.
ಆದರೆ ಆಗಸ್ಟ್ ಕೊನೆಯಲ್ಲಿ ಜುಲೈ ತಿಂಗಳ ವೇತನ ನೀಡಿದ್ದರು. ನಂತರ ಆಗಸ್ಟ್ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ಗಣೇಶ ಹಬ್ಬಕ್ಕೂ ಮುನ್ನ ನೌಕರರ ಬ್ಯಾಂಕ್ ಖಾತೆಗಳಿಗೆ ಹಾಕಿದ್ದರು. ಆ ಬಳಿಕ ಅಂದರೆ ಅಕ್ಟೋಬರ್ ಮೊದಲ ವಾರ ಪ್ರಾರಂಭವಾಗಿದ್ದರೂ ಉಳಿದರ್ಧ ವೇತನ ಬಿಡುಗಡೆ ಮಾಡೇ ಇರಲಿಲ್ಲ.
ನೌಕರರು ದುಡಿದರೂ ಮತ್ತು ಸಂಸ್ಥೆಗಳು ಈಗ ಆದಾಯ ಗಳಿಸುತ್ತಿದ್ದರೂ ಏಕೋ ಏನೋ ವೇತನವನ್ನು ಮಾತ್ರ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಕಾರಣ ಕೇಳಿದರೆ ಅಧಿಕಾರಿಗಳು ನಮ್ಮ ನಿಗಮಗಳಿಂದ ಕೊಡಬೇಕಿದ್ದ ಅರ್ಧ ವೇತನವನ್ನು ಬಿಡುಗಡೆ ಮಾಡಿದ್ದೇವೆ. ಇನ್ನರ್ಧ ವೇತನ ಸರ್ಕಾರ ಬಿಡುಗಡೆ ಮಾಡಬೇಕು. ಆದರೆ ಈವರೆಗೂ ಸರ್ಕಾರ ಬಿಡುಗಡೆ ಮಾಡಿಲ್ಲ. ನಮಗೆ ಪೂರ್ತಿ ವೇತನ ನೀಡುವಷ್ಟು ಆದಾಯ ಇನ್ನೂ ಬರುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ.
ಹೀಗಾಗಿ ಮತ್ತೆ ನೌಕರರು ವೇತನ ಸಿಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಬಂಧಪಟ್ಟ ಸಚಿವರು ವೇತನ ಬಿಡುಗಡೆ ಮಾಡುವತ್ತ ಗಮನ ಹರಿಸಬೇಕಿದೆ.
ಇನ್ನು ಪ್ರಸ್ತುತ ಸೆಪ್ಟಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳ ಅರ್ಧ ಅರ್ಧ ವೇತನವನ್ನು ಬಾಕಿ ಉಳಿಸಿಕೊಂಡು ನೌಕರರಿಗೆ ಮಾನಸಿವಾಗಿ ಹಿಂಸೆ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈಗ ಮತ್ತೆ 6 ದಿನ ಕಳೆದರೆ ನವೆಂಬರ್ ತಿಂಗಳ ವೇತನವನ್ನು ಡಿ.5ರೊಳಗೆ ಬಿಡುಗಡೆ ಮಾಡಬೇಕು.
ಆದರೆ ಸೆಪ್ಟಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳ ಅರ್ಧ ಅರ್ಧ ವೇತನವನ್ನೇ ಇನ್ನೂ ಬಿಡುಗಡೆ ಮಾಡಲ್ಲ. ಇನ್ನು ನವೆಂಬರ್ ತಿಂಗಳ ವೇತನ ಯಾವಾಗ ಬಿಡುಗಡೆ ಮಾಡುತ್ತರೋ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಾವು ನಿತ್ಯ ಆದಾಯವನ್ನು ಕೊರತೆ ಇಲ್ಲದಂತೆ ತರುತ್ತಿದ್ದೇವೆ. ಆದರೂ ಅಧಿಕಾರಿಗಳು ಮಾತ್ರ ಆದಾಯವಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಎಲ್ಲಿ ಸೋರಿಕೆಯಾಗುತ್ತಿದೆ ಎಂದೇ ತಿಳಿಯುತ್ತಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.
ಈ ಬಗ್ಗೆ ಎಚ್ಚರಿಕೆ ವಹಿಸಿ ಜತೆಗೆ ಕೂಡಲೇ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದು ನೌಕರರು ಸಚಿವರು ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಮಧ್ಯೆ ಸರ್ಕಾರ ಸೇವೆಗೆಂದೇ ಮೀಸಲಿಟ್ಟಿರುವ ಸಾರಿಗೆ ಸಂಸ್ಥೆಯಲ್ಲಿ ಲಾಭ-ನಷ್ಟವನ್ನು ಲೆಕ್ಕಹಾಕದೆ ನೌಕರರಿಗೆ ಬರಬೇಕಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದಲು ಕೇಳಿ ಬರುತ್ತಿದೆ.