ಪಿರಿಯಾಪಟ್ಟಣ: ಪೌರ ಕಾರ್ಮಿಕರ ಜೀವನ ಸದೃಢತೆಗೆ ಪಂಚಾಯಿತಿ ಅಧಿಕಾರಿಗಳು ಸಹಕರಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಕುಂದುಕೊರತೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪೌರಕಾರ್ಮಿಕ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಇದನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ಕಾರ್ಮಿಕರಿಗೆ ತಲುಪಿಸುವ ಕಾರ್ಯವಾಗಬೇಕು. ಕಾರ್ಮಿಕರು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅಧಿಕಾರಿಗಳ ಗಮನಕ್ಕೆ ತಂದರೆ ಅವುಗಳನ್ನು ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದರು.
ಕಾರ್ಮಿಕರ ವೇತನವನ್ನು ಯಾವುದೇ ಕಾರಣಕ್ಕೂ ತಡಮಾಡದೆ ತಿಂಗಳ 10 ನೇ ತಾರೀಖಿನಂದು ನೀಡಬೇಕು ಮತ್ತು 34 ಪಂಚಾಯಿತಿಗಳಲ್ಲಿ 19 ಜನ ಪೂರ್ಣ ಕಾರ್ಮಿಕರಿದ್ದು ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯಗಳ ಜತೆಗೆ ಅವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ, ವಸತಿ ನಿರ್ಮಾಣಕ್ಕೆ ಅನುದಾನವನ್ನು ನೀಡುವುದರ ಮೂಲಕ ಆರ್ಥಿಕವಾಗಿ ಸದೃಢರಾಗಲು ಸಹಕರಿಸಬೇಕು ಹಾಗೂ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಗಳು ಮತ್ತು ಆರೋಗ್ಯ ಕಾರ್ಡ್ ಕಡ್ಡಾಯವಾಗಿ ಇಲಾಖೆ ಅಧಿಕಾರಿಗಳು ಮಾಡಿಸಬೇಕು ಎಂದು ಸೂಚಿಸಿದರು.
ಸಫಾಯಿ ಕರ್ಮಚಾರಿ ಮೇಲ್ವಿಚಾರಣಾ ಸಮಿತಿ ಸದಸ್ಯ ಎಚ್.ಕೆ.ಮಹೇಶ್ ಮಾತನಾಡಿ ಅಸಂಘಟಿತ ಸಮುದಾಯಗಳಲ್ಲಿ ಪೌರಕಾರ್ಮಿಕ ಸಮುದಾಯವು ಒಂದಾಗಿದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರವು ವಿವಿಧ ಸಮಿತಿಗಳನ್ನು ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ಪೌರಕಾರ್ಮಿಕರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಆತ್ಮಸ್ಥೈರ್ಯ ಕಳೆದುಕೊಂಡು ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಕಾರ್ಮಿಕರ ಸಮಸ್ಯೆ ಆಲಿಸಲು ಕರೆಯಬೇಕು ಮತ್ತು ಇವರಿಗೆ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದರಲ್ಲದೆ ಯಾವುದೇ ಪೌರಕಾರ್ಮಿಕರು ದೃತಿಗೆಡದೆ ಸಮಾಜದಲ್ಲಿ ಇತರರಂತೆ ಜೀವನ ನಡೆಸಲು ಆತ್ಮಸ್ಥೈರ್ಯ ತುಂಬಿ ಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ ಕಳಲೆ ಗ್ರಾಮ ಪಂಚಾಯಿತಿ ನೌಕರ ರಂಗ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು ಮತ್ತು ಪೌರ ಕಾರ್ಮಿಕ ನೌಕರರಿಗೆ ಕಾರ್ಯನಿರ್ವಾಹಕಧಿಕಾರಿ ಫುಡ್ ಕಿಟ್ ವಿತರಿಸಿದರು.
ಸಫಾಯಿ ಕರ್ಮಚಾರಿ ಮೇಲ್ವಿಚಾರಣಾ ಸಮಿತಿ ಸದಸ್ಯೆ ಲಕ್ಷ್ಮಿ ಕೋಟೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪರಮೇಶ್, ಹರೀಶ್, ವೀರಭದ್ರ ಶೆಟ್ಟಿ, ರಾಜಶೇಖರ್, ದಿವಾಕರ,ರವಿ, ಬೋರೇಗೌಡ,ಪ್ರಶಾಂತ್, ನೌಕರರ ಸಂಘದ ಮುಖಂಡ ಮುರುಗೇಶ್ ಸೇರಿದಂತೆ ಇತರರು ಇದ್ದರು.