ಬೆಂಗಳೂರು: ನಗರದಲ್ಲಿ ಮಳೆಗಾದಲ್ಲಿ ಜಲಾವೃತವಾಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮಾನ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಧಿಕಾರಿ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮಳೆಗಾಲದ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಅಧಿಕಾರಿಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಳೆಗಾದಲ್ಲಿ ರಾಜಕಾಲುವೆ, ರಸ್ತೆ ಬದಿಯ ಚರಂಡಿಗಳು, ಶೋಲ್ಡರ್ ಡ್ರೈನ್ಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಬೇಕು. ರಸ್ತೆಗಳಲ್ಲಿ ಅಗೆದು ಬಿಟ್ಟಿರುವ ಮಣ್ಣು ನೀರುಗಾಲುವೆಗಳಿಗೆ ಸೇರದಂತೆ ಕೂಡಲೆ ತೆರುವಗೊಳಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬೆಸ್ಕಾಂ, ಜಲಮಂಡಳಿ ಇಲಾಖೆಯು ರಸ್ತೆ ಕತ್ತರಿಸಬೇಕಾದರೆ ಕಡ್ಡಾಯವಾಗಿ ಪಾಲಿಕೆಯಿಂದ ಅನುಮತಿಪಡೆಯಬೇಕು ಹಾಗೂ ರಸ್ತೆ ಕತ್ತರಿಸಿದ ಭಾಗವನ್ನು ಸಂಬಂಧಪಟ್ಟ ಇಲಾಖೆಗಳೇ ತ್ವರಿತವಾಗಿ ಪುನಶ್ಚೇತನ ಕಾರ್ಯ ಮಾಡಬೇಕು. ಪುನಶ್ಚೇತನ ಮಾಡಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪ್ರಮಾಣಿಕರಿಸಬೇಕು.
ಎಲ್ಲಾ ವಾರ್ಡ್ಗಳಲ್ಲಿಯೂ ಆದ್ಯತೆ ಮೇರೆಗೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೋಲ್ಳುವಂತೆ ಸೂಚಿಸಿದ ಆಡಳಿತಗಾರರು ಆಯಾ ವಲಯ ಮುಖ್ಯ ಇಂಜಿನಿಯರ್ಗಳು ಯಾವ್ಯಾವ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು.
ಮುಖ್ಯ ಆಯುಕ್ತರು ಗೌರವ್ ಗುಪ್ತರ ಮಾತನಾಡಿ, ಮಳೆಗಾದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ರಸ್ತೆಗಳ ಮೇಲೆ ನೀರು ನಿಲ್ಲದಂತೆ ರಸ್ತೆ ಬದಿಯ ಚರಂಡಿ ಹಾಗೂ ಶೋಲ್ಡರ್ ಡ್ರೈನ್ಗಳಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯಾ ವಾರ್ಡ್ ವ್ಯಾಪ್ತಿಯ ರಸ್ತೆಗಳ ಜವಾಬ್ದಾರಿ ಹೊಂದಿರುವ ಇಂಜಿನಿಯಿಯರ್ಗಳು ರಸ್ತೆಗಳ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ಬೆಸ್ಕಾಂ, ಜಲಮಂಡಳಿ ಹಾಗೂ ಇನ್ನಿತರೆ ಇಲಾಖೆಗಳು ಪಾಲಿಕೆ ಅನುಮತಿ ಪಡೆಯದೆ ಅನಧಿಕೃತವಾಗಿ ರಸ್ತೆ ಅಗೆಯುತ್ತಿದ್ದರೆ ಅಂತಹ ಇಲಾಖೆ ಮೇಲೆ ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸಂಬಂಧಪಟ್ಟ ಇಲಾಖೆಯಿಂದಲೇ ಪುನಶ್ಚೇತನ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಮಳೆ ನಿಂತ ಕೂಡಲೆ ಎಲ್ಲಾ ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಾರಂಭವಾಗಬೇಕು. ಜೊತೆಗೆ ಹಾಳಾಗಿರುವ ರಸ್ತೆಗಳನ್ನು ಆದ್ಯತೆ ಮೇರೆಗೆ ಕೂಡಲೆ ದುರಸ್ತಿ ಪಡಿಸುವ ಕೆಲಸ ಮಾಡಬೇಕು. ರಸ್ತೆ ದುರಸ್ತಿ ಕಾರ್ಯವು ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಮುಖ್ಯ ಇಂಜಿನಿಯರ್ಗಳು, ರಸ್ತೆಮೂಲಭೂತ ಸೌಕರ್ಯ ವಿಭಾಗದ ಇಂಜಿನಿಯರ್, ಯೋಜನಾ ವಿಭಾಗದ ಇಂಜಿನಿಯರ್, ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.