ಬೆಂಗಳೂರು: ಮುಷ್ಕರದ ವೇಳೆ ವಜಾ, ಅಮಾನತು, ವರ್ಗಾವಣೆ ಮತ್ತು ಆಗಿರುವ ಪೊಲೀಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಡುವುದಾಗಿ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಹೊತ್ತಿನಲ್ಲಿ ಹೋರಾಟ ಮಾಡುವುದು ಬೇಡ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಮತ್ತು ಸಾರಿಗೆ ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ ನಾವು ಬೀದಿಗಿಳಿಯದೇ ಅವರ ಭರಸವೆಯನ್ನು ಇನ್ನೂ ಕೆಲವುದಿನಗಳವರೆಗಷ್ಟೇ ಕಾಯೋಣ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಹೋರಾಟದಲ್ಲಿ ಕೂಟದಿಂದ ಯಾರು ಭಾಗಿಯಾಗುವುದಿಲ್ಲ ಎಂದು ಹೇಳಿದರು.
ಇನ್ನು ಸರ್ಕಾರ ಮತ್ತು ಅಧಿಕಾರಿಗಳು ಭರಸವಸೆ ನೀಡಿರುವಂತೆ ಮುಂದಿನ ದಿನಗಳಲ್ಲಿ ಸಂಧಾನ ಸಫಲವಾಗದಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಕೂಟದ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಲವಾರು ನೌಕರರು ಹೇಳುತ್ತಿದ್ದಾರೆ ಎಂದು ವಿವರಿಸಿದರು.
ಇನ್ನು ವಜಾಗೊಂಡಿರುವ ನೌಕರರು ಕಾರ್ಮಿಕ ನ್ಯಾಯಾಲಯಕ್ಕೆ 6 ತಿಂಗಳ ಒಳಗೆ ಹೋಗಬೇಕಿದೆ. ಆದರೆ ಇನ್ನು ಆರು ತಿಂಗಳು ಆಗಿಲ್ಲದಿರುವುದರಿಂದ ಈಗಲೇ ನೌಕರರು ದುಡುಕುವುದು ಬೇಡ. ಜತೆಗೆ ಈಗ ವಜಾಗೊಂಡಿರುವ ನಾವು ಜೀವನ ನಡೆಸುವುದೆ ಕಷ್ಟವಾಗುತ್ತಿದೆ. ಹೀಗಾಗಿ ನಾವು ಕೂಟದಿಂದಲೇ ವಕೀಲರನ್ನು ನೇಮಕ ಮಾಡುತ್ತಿದ್ದೇವೆ. ಒಬ್ಬ ನೌಕರ 4 ಸಾವಿರ ರೂ. ಕೊಟ್ಟು ತಮ್ಮ ಪ್ರಕರಣದ ವಕಾಲತ್ತು ವಹಿಸುವುದಕ್ಕೆ ಸಹಕರಿಸಿ ಎಂದು ಹೇಳಿದ್ದೇವೆ.
ಅಂದ ಮಾತ್ರಕ್ಕೆ ನೀವು ಕೂಟದವರಿಗೆ ಹಣಕೊಡಬೇಕು ಎಂದು ಹೇಳಿಲ್ಲ. ಈ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬೊಬ್ಬರೂ ಒಬ್ಬೊಬ್ಬ ವಕೀಲರನ್ನು ನೇಮಿಸಿಕೊಂಡರೆ ಸಾವಿರಾರು ರೂಪಾಯಿಯನ್ನು ವಕೀಲರಿಗೆ ಕೊಡಬೇಕಾಗುತ್ತದೆ. ಹೀಗಾಗಿ ಒಬ್ಬರೇ ವಕೀಲರು ವಕಾಲತ್ತು ವಹಿಸಿದ್ದರೆ ನೌಕರರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಿಲ್ಲ ಎಂಬ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನು ಕೂಟಕ್ಕೆ ಬಂದಿರುವ ಸದಸ್ಯತ್ವ ನೋಂದಣಿ ಹಣ ಏನಾಯಿತು ಎಂದು ಕೆಲವರು ಕೇಳುತ್ತಿದ್ದೀರಿ ನಾವು ಎಲ್ಲವನ್ನು ಕೊಡಲು ಸಿದ್ಧರಿದ್ದೇವೆ. ಎಲ್ಲ ಲೆಕ್ಕವನ್ನು ಕೊಡುತ್ತೇವೆ. ಈಗ ಕೂಟದ ಕಚೇರಿ ಕೂಡ ಓಪನ್ ಆಗಿದೆ. ಹೀಗಾಗಿ ನಾವು ನೋಟಿಸ್ ಬೋರ್ಡ್‌ನಲ್ಲೇ ಹಾಕುತ್ತೇವೆ ಎಂದು ತಿಳಿಸಿದರು.
ಇನ್ನು ಕೂಟದಲ್ಲಿ ಕೇಳಿದಂತೆ ಉಳಿದ ಸಂಘಟನೆಗಳಲ್ಲೂ ಲೆಕ್ಕ ಕೇಳುವ ಎದೆಗಾರಿಕೆಯನ್ನು ತಾವು ತೋರಿಸಬೇಕು. ನೌಕರರು ಕಷ್ಟಪಟ್ಟು ದುಡಿದು ಕಟ್ಟಿರುವ ಹಣವನ್ನು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಕೇಳಿ ಬಹಿರಂಗ ಪಡಿಸಿ ಎಂದು ಕೂಡ ಆಗ್ರಹಿಸಿದರು.
ನೆಲಮಂಗಲ ಡಿಪೋ ನೌಕರ ರಂಗಸ್ವಾಮಿ ಎಂಬುವರು ಕೂಟದ ಸದಸ್ಯರು ಅಧಿಕಾರಿಗಳನ್ನು ಬೈಯುತ್ತಾರೆ ಎಂದು ಹೇಳಿದ್ದೀರಿ. ಅದನ್ನು ಕೂಟದವರು ಬೈದಿದ್ದಾರೆ ಎಂದು ಹೇಗೆ ಹೇಳುತ್ತೀರಾ? ಅದನ್ನು ಮಾಡಿದವರು ಯಾರು ಎಂದು ನಿಮಗೂ ಗೊತ್ತಿದೆ. ಯಾವ ಸಂಘಟನೆಗಳು ನೌಕರರ ಬೇಡಿಕೆ ಈಡೇರಿಸದಂತೆ ಸರ್ಕಾರ ಮತ್ತು ಸಚಿವರನ್ನು ತಡೆದವು ಎಂಬುವುದು ನಿಮಗೂ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ನಿಮ್ಮ ಕಷ್ಟಗಳು ನಮಗೆ ಗೊತ್ತಿದೆ ಹಾಗಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಡುತ್ತೇವೆ ಎಂದು ಸಚಿವರು ಭರಸವೆ ನೀಡಿದ್ದಾರೆ. ಹೀಗಾಗಿ ಎಲ್ಲವೂ ಸರಿಯಾಗುತ್ತಿರುವ ಹೊತ್ತಿನಲ್ಲಿ ಮತ್ತೆ ಗಾಯಮಾಡಿಕೊಳ್ಳುವುದು ಬೇಡ. ಸಚಿವರು ನೌಕರರ ಪರ ಇದ್ದಾರೆ. ಜತೆಗೆ ಇಲಾಖೆಯ ಉನ್ನತ ಅಧಿಕಾರಿಗಳು ಅತೀ ಶೀಘ್ರದಲ್ಲೇ ಎಲ್ಲವನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಿತ್ತಿದ್ದಾರೆ. ಹೀಗಾಗಿ ಯಾರು ಆತಂಕಕ್ಕೆ ಒಳಗಾವುದು ಬೇಡ. ಎಲ್ಲರಿಗೂ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳಿದರು.