ದಾಬಸ್ಪೇಟೆ: ಪಾದಯಾತ್ರೆ ನಿರತ ಸಾರಿಗೆ ನೌಕರರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನದ ಅಂಗವಾಗಿ ಇಂದು ನಗರದ ಸಿದ್ದಲಿಂಗೇಶ್ವರ ಸಮುದಾಯ ಭವನದ ಆವರಣದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ನ.29ರಂದು ಬಳ್ಳಾರಿಯಿಂದ ಬೆಂಗಳೂರಿನ ವಿಧಾನಸೌಧದವರೆಗೂ ಸ್ವಾಭಿಮಾನಿ ಸಾರಿಗೆ ನೌಕರರು ಎಂಬ ಬ್ಯಾನರ್ನಡಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಇಂದಿಗೆ 8ದಿಗಳು ಆಗಿವೆ.
ಈ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನವಾದ ಇಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ವಿರೋಧಿಸಿ ನಿಲ್ಲುವ ಧೈರ್ಯ ಬರಲು ಅವರು ರಚಿಸಿದ ಸಂವಿಧಾನವೇ ಕಾರಣ ಎಂದು ನೌಕರರು ಹೇಳಿದರು.
ಅಂಬೇಡ್ಕರ್ ಅವರು ತಮ್ಮ ಬಾಲ್ಯದಲ್ಲಿ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ ಅನುಭವಿಸಿದ್ದರು. ಅದರ ಆಧಾರದ ಮೇಲೆ ಸಂವಿಧಾನ ರಚಿಸಿದರು. ಆ ಸಂವಿಧಾನವೇ ನಮಗೆ ದಾರಿ ದೀಪವಾಗಿದೆ. ಈಗ ನಾವು ಪಾದಯಾತ್ರೆ ಮಾಡಲು ಅವರ ಸಂವಿಧಾನ ರಚನೆಯೇ ಕಾರಣ ಮತ್ತು ಪ್ರೇರಣೆ ಎಂದು ಹೇಳಿದರು.
ಇನ್ನು ಸಾರಿಗೆ ನೌಕರರ ಪಾದಯಾತ್ರೆಗೆ ಅಸಂಘಟಿದ ಕಾರ್ಮಿಕರ ಮುಖಂಡರೂ ಬೆಂಬಲ ಸೂಚಿಸಿದ್ದು, ನಿಮ್ಮ ನ್ಯಾಯಯುತ ಹೋರಾಟಕ್ಕೆ ನಾವು ಮಧ್ಯರಾತ್ರಿಯಲ್ಲಿ ಕರೆದರೂ ಬರಲು ಸಿದ್ಧರಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಗಂಗಾಧರಯ್ಯ ಹೇಳಿದರು.
ಇನ್ನು ಸಿಐಟಿಯು ದಾಬಸ್ಪೇಟ್ ಘಟಕದ ಪದಾಧಿಕಾರಿಗಳು ಸಾರಿಗೆ ನೌಕರರ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದು, ಹೋರಾಟಕ್ಕೆ ನಾವು ಸದಾ ಸಿದ್ಧರಿದ್ದೇವೆ ನಿಮ್ಮ ಪಾದಯಾತ್ರೆಗೆ ಜಯವಾಗಲಿ ಎಂದು ಹೇಳಿದರು.
ಹೀಗೆ ನೌಕರರ ಪಾದಯಾತ್ರೆಗೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸುತ್ತಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಾವು ಕೂಡ ಕೂ ಜೋಡಿಸುತ್ತೇವೆ ಎಂಬ ಭರವಸೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪಾದಯಾತ್ರೆ ನಿರತ ನೌಕರರಿಗೆ ಹುಮ್ಮಸ್ಸು ಇನ್ನಷ್ಟು ಇಮ್ಮಡಿಗೊಳ್ಳುತ್ತಿದ್ದು, ಇಷ್ಟು ಬೇಗ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದೇವೆಯೇ ಇನ್ನಷ್ಟು ದಿನ ಪಾದಯಾತ್ರೆ ಮಾಡಬೇಕಿತ್ತು ಎಂದು ಹೇಳುತ್ತಿದ್ದಾರೆ.
ಸ್ವಾಭಿಮಾನಿ ಸಾರಿಗೆ ನೌಕರರು ಎಂಬ ಬ್ಯಾನರ್ ನಡಿ ಪಾದಯಾತ್ರೆ ಮಾಡುತ್ತಿರುವ ಸಾರಿಗೆಯಲ್ಲಿ ವಜಾಗೊಂಡ ನೌಕರರಿಗೆ ದಾರಿ ಮಧ್ಯೆ ಬರುತ್ತಿರುವ ಗ್ರಾಮಗಳ ಗ್ರಾಮಸ್ಥರು ಊಟ, ತಿಂಡಿ, ಎಳನೀರು ಸೇರಿದಂತೆ ಹಲವು ರೀತಿಯಲ್ಲಿ ಸಹಕಾರ ಸಹಾಯ ಮಾಡುತ್ತಿರುವುದು ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ನೌಕರರು ಹೇಳುವ ಮೂಲಕ ಭಾವುಕರಾಗುತ್ತಿದ್ದಾರೆ.
ಅವರ ಹೋರಾಟಕ್ಕೆ ಗ್ರಾಮಗಳ ಹಿರಿಯರು ಆಶೀರ್ವಾದಿಸುತ್ತಿದ್ದು, ನೌಕರರ ಆರೋಗ್ಯವನ್ನು ವಿಚಾರಿಸುತ್ತಿರುವುದು ನಿಜಕ್ಕೂ ಮನ ಮಿಡಿಯುವಂತಿದೆ. ನೌಕರರ ಈ ಹೋರಾಟಕ್ಕೆ ಜಯ ಸಿಗಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಿದ್ದಾರೆ.