ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ವಿವಾದಿತ ಕೃಷಿ ಕಾಯ್ದೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೋದಿ ಸರ್ಕಾರಕ್ಕೆ ಚಳಿ ಬಿಡಿಸಿದ್ದು, ಜಾರಿ ಮಾಡುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನಾವೇ ಮಧ್ಯ ಪ್ರವೇಶ ಮಾಡಿ ಕ್ರಮ ತೆಗೆದುಕೊಳ್ಳಬೇಕೋ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಅಸಮಾಧಾನಗೊಂಡಿದೆ. ಕೃಷಿ ಕಾಯ್ದೆ ವಿರುದ್ಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್, ಈ ಕಾನೂನು ಜಾರಿಗೆ ತರುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕೆಂದು ತಿಳಿಸಿದೆ.
ಈ ಕಾನೂನು ಜಾರಿಗೆ ತರುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನ್ಯಾಯಾಲಯವೇ ಈ ಕೆಲಸ ಮಾಡಬೇಕೋ ಎಂಬುದನ್ನು ನೀವು ತಿಳಿಸಿ ಎಂದು ಸಿಜೆಐ ಕುಟುಕಿದ್ದಾರೆ. ಆದರೆ, ಸರ್ಕಾರದ ಪರವಾಗಿ ವಾದಿಸಿ ಅಟಾರ್ನಿ ಜನರಲ್ ಅವರು ನೂತನ ಕೃಷಿ ಕಾನೂನನ್ನು ಸ್ಥಗಿತಗೊಳಿಸುವುದು ಸಮಂಜಸ ಆಗುವುದಿಲ್ಲ ಎಂದು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ.
ನಾವು ಅನಗತ್ಯವಾಗಿ ಮಾತನಾಡಲು ಬಯಸುವುದಿಲ್ಲ. ಆದರೆ, ಕೇಂದ್ರದ ವರ್ತನೆಯಿಂದ ಬಹಳ ನಿರಾಸೆಯಾಗಿದೆ. ಅವರು ಯಾವ ರೀತಿಯ ಸಮಾಲೋಚನೆ ಪ್ರಕ್ರಿಯೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ದಯವಿಟ್ಟು ಏನಾಗುತ್ತಿದೆ ಎಂದು ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಕೇಂದ್ರವನ್ನು ಖಾರವಾಗಿ ಕೇಳಿದ್ದಾರೆ.
ಸಮ್ಮತವಾದ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ. ಕೃಷಿ ಕಾನೂನುಗಳನ್ನು ಸ್ಥಗಿತಗೊಳಿಸಬೇಕೆಂಬ ಸಲಹೆ ಬಗ್ಗೆ ಯಾಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ? ಕೇಂದ್ರ ಸರ್ಕಾರ ಈ ಕಾನೂನುಗಳ ಜಾರಿಯನ್ನು ನಿಲ್ಲಿಸಿದರೆ ಮಾತುಕತೆಗೆ ನಾವು ರೈತರನ್ನು ಒಪ್ಪಿಸುತ್ತೇವೆ ಎಂದು ಹೇಳಿದೆ.
ಇದೇ ವೇಳೆ, ರೈತರ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂಬ ಸಲಹೆಯನ್ನು ಪ್ರತಿಭಟನಾಕಾರರಿಗೆ ಕೇಳಿತು. ನ್ಯಾಯಾಲಯವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆಯ ಸ್ಥಳವನ್ನು ಬದಲಿಸಬಹುದಾ ಎಂದು ಕೇಳುತ್ತಿದ್ದೇವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಕಾಯ್ದೆ ಕುರಿತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದರಲ್ಲಿಯೂ ರೈತರ ಪ್ರತಿಭಟನೆ ಕುರಿತು ಮೋದಿ ಸರ್ಕಾರದ ವಿರುದ್ಧ ತೀವ್ರ ದೇಶದ ಅತ್ಯುನ್ನತ ಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ವಯೋವೃದ್ಧರು, ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಮಂದಿ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಇಷ್ಟಾದರೂ ಕಾಯ್ದೆ ಬಗ್ಗೆ ಸರ್ಕಾರ ಪ್ರತಿಷ್ಠೆ ತೋರುತ್ತಿರುವುದು ಸರಿಯಲ್ಲ ಎಂದು ಹೇಳಿದೆ.
ಕಳೆದ ನಲವತ್ತು ದಿನಗಳಿಂದ ದಿಲ್ಲಿ ಗಡಿಯಲ್ಲಿ ರೈತರು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಏಳೆಂಟು ಸುತ್ತಿನ ಮಾತುಕತೆ ನಡೆಸಿದ್ದರೂ ಈವರೆಗೆ ಯಾವುದೇ ಫಲ ನೀಡಿಲ್ಲ.