ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕಿನಿಂದ ಜನರನ್ನು ದೂರವಿಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿದ್ದು, ಇಂದು 263 ಸ್ಥಳಗಳಲ್ಲಿ ಡ್ರೈ ರನ್ ಪ್ರಾರಂಭ ಆಗಲಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂದು ಖಾಸಗಿ ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಂದು ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡುತ್ತೇನೆ ಎಂದರು.
ಈಗಾಗಲೇ ಯಾವುದೇ ಲೋಪ, ತಾಂತ್ರಿಕ ಸಮಸ್ಯೆ ಆಗದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದಿನಿಂದ ಜಾಹೀರಾತು ಸಹ ನೀಡಲಾಗುತ್ತಿದೆ. ಯಾರಾದರೂ ಕೋವಿಡ್ ವಾರಿಯರ್ಸ್ಗಳು ದಾಖಲು ಮಾಡಿಲ್ಲ ಅಂದ್ರೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ಇನ್ನು ಯಾವುದೇ ಲಸಿಕೆಗೂ ಮಾಧ್ಯಮ ಕ್ಷೇತ್ರದಿಂದ ಇಷ್ಟೊಂದು ಒತ್ತಡ ಇರಲಿಲ್ಲ. ಕ್ಲಿನಿಕಲ್ ಟ್ರಯಲ್ ಸೇರಿ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಬೇಕಾಗುತ್ತದೆ. ವಿಜ್ಞಾನಿಗಳು, ಸಂಶೋಧಕರ ಮೇಲೆ ನಂಬಿಕೆ ಇಡೋಣ. ಆದಷ್ಟು ಬೇಗ ಲಸಿಕೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಟರ್ ಆಸ್ಪತ್ರೆಗೆ ಭೇಟಿ ಬಳಿಕ ಮಾತನಾಡಿದ ಡಾ.ಕೆ ಸುಧಾಕರ್, ನಾಳೆ ಕೇಂದ್ರ ಸರ್ಕಾರದಿಂದ 13 ಲಕ್ಷದ 90 ಸಾವಿರ(13,90,000) ಲಸಿಕೆ ಕರ್ನಾಟಕಕ್ಕೆ ಬರಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದ ತಿಳಿಸುತ್ತೇನೆ.
ನಾವು 263 ಕೇಂದ್ರಗಳಲ್ಲಿ ಡ್ರೈ ರನ್ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಹೇಗಿದೆ ಎಂದು ನೋಡಿ ಬಳಿಕ ಡ್ರೈ ರನ್ ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ತುಂಬಾ ಚೆನ್ನಾಗಿ, ಅಚ್ಚುಕಟ್ಟಾಗಿ ಮಾಡಿದ್ದಾರೆ. ನಾನು ಇದೀಗ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲೂ ಪರಿಶೀಲನೆ ನಡೆಸುತ್ತೇನೆ ಎಂದರು.