ಮುಂಬೈ: ಲಾಕ್ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತು ಮನೆಮಾತಾಗಿರುವ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹೌದು! ಅನುಮತಿ ಪಡೆಯದೆ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ (ಬಿಎಂಸಿ) ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಈ ಪ್ರಕರಣ ದಾಖಲಿಸಿದೆ.
ಸೋನು ಸೂದ್ ಅವರಿಗೆ ಮುಂಬೈನಲ್ಲಿ 6 ಮಹಡಿಯ ಕಟ್ಟಡ ವಿದ್ದು, ಈ ಕಟ್ಟಡವನ್ನು ಇತ್ತೀಚೆಗಷ್ಟೇ ಹೋಟಲ್ ಆಗಿ ಮಾರ್ಪಡಿಸಿ ಕೋವಿಡ್ ಸೋಂಕಿತರು ಉಳಿದು ಕೊಳ್ಳಲು ವ್ಯವಸ್ಥೆ ನಾಡಿದ್ದರು. ಇದಕ್ಕೆ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದೆ.
ಅನುಮತಿ ಇಲ್ಲದೆ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಲಾಗಿದೆ. 2020ರ ಅಕ್ಟೋಬರ್ 27ರಂದು ಸೋನು ಸೂದ್ ಅವರಿಗೆ ಈ ಸಂಬಂಧ ಕಾರಣ ಕೇಳಿ ಮೊದಲ ಬಾರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ನಂಬರ್ 27 ರ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಒಂದು ತಿಂಗಳ ಕಾಲ ಸಮಯ ನೀಡಿದ್ದರೂ ಉತ್ತರಿಸಲಿಲ್ಲ ಎಂದು ಬಿಎಂಸಿ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.
2021 ರ ಜನವರಿ ನಾಲ್ಕರಂದು ನಟನ ಆಸ್ತಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗಿದ್ದು ಈ ವೇಳೆ ಅನಧಿಕೃತವಾಗಿ ಹೆಚ್ಚುವರಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಆದರೂ ಇದುವರೆಗೂ ಯಾವುದೇ ಸೂಚನೆಗಳಿಗೆ ನಟ ಪ್ರತಿಕ್ರಿಯಿಸಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.
ಸದ್ಯ ಅಧಿಕಾರಿಗಳ ದೂರು ಸ್ವೀಕರಿಸಿರುವ ಪೊಲೀಸರು ನಟನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವುದಾಗಿ ಹೇಳಿದ್ದಾರೆ.