ಹಾಸನ: ಹಾಸನಾಂಬೆ ಉತ್ಸವ ಮೊನ್ನೆಯಿಂದ ಆರಂಭವಾಗಿದ್ದು, ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬದವರು ಶಕ್ತಿದೇವಿ ಹಾಸನಾಂಬೆಯ ದರ್ಶನ ಪಡೆದರು.
ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಹಾಗೂ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ವೇಳೆಗೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರಿಯರಾದ ಅನಸೂಯ, ಶೈಲಜಾ ಹಾಗೂ ಮೊಮಗ ಸೂರಜ್ ರೇವಣ್ಣ ದೇವಿ ದರ್ಶನ ಪಡೆದರು.
ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡಗೌಡರು, ʻಪ್ರತಿ ವರ್ಷದಂತೆ ಹಾಸನಾಂಬೆ ದೇವಿಗೆ ಕುಟುಂಬ ಸಮೇತರಾಗಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಈ ಬಾರಿ ಕೊರೊನಾ ಇರುವುದರಿಂದ ಸಂದರ್ಭ ಕ್ಲಿಷ್ಟಕರವಾಗಿದೆ. ಕಳೆದ ವರ್ಷ ಲಕ್ಷಾಂತರ ಜನರು ದೇವಿಯ ದರ್ಶನ ಪಡೆದಿದ್ದರು. ವರ್ಷ ಪೂರ್ತಿ ಗರ್ಭಗುಡಿಯಲ್ಲಿ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ಎಲ್ಲರಿಗೂ ಹಾಸನಾಂಬೆ ಆರೋಗ್ಯ ನೀಡಲಿ ಎಂದು ಬೇಡಿಕೊಂಡಿದ್ದೇನೆ’ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ದೇವೇಗೌಡ ದಂಪತಿಯನ್ನು ಸನ್ಮಾನಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಇದ್ದರು.