ಹಾವೇರಿ: ಶಾಲಾ ಕೊಠಡಿ ನಿರ್ಮಾಣಕ್ಕೆಂದು ತೆಗೆದಿದ್ದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.
ಬ್ಯಾಡಗಿ ಪಟ್ಟಣದ ಸಂತೆ ಮೈದಾನದಲ್ಲಿ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ತೆಗೆದ ಗುಂಡಿಯಲ್ಲಿ ಗೋವಾದಿಂದ ದೇವಿಹೊಸೂರು ಗ್ರಾಮದ ಅಜ್ಜನ ಮನೆಗೆ ಬಂದಿದ್ದ ಇನಾಯತ್ ಹಾವಣಗಿ ಎಂಬುವರ ಮಕ್ಕಳಾದ ಸೈಯದ್ ಅಕ್ಮಲ್ (8), ಸೈಯದ್ ಅಶ್ಫಾಕ್ (10) ಹಾಗೂ ಕುಂಬಾರ ಓಣಿಯ ಜಾಫರ್ ಅನಾಮುಲ್ಲಾ ಸವಣೂರ (10) ಮೃತಪಟ್ಟಿವೆ.
ಸಂತೆಗೆ ಹೊರಟಿದ್ದ ತಾಯಿಯನ್ನು ಹಿಂಬಾಲಿಸಿದ್ದ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಾಗಿತ್ತು. ಆದರೆ ಮೂರು ಮಕ್ಕಳು ಸೇರಿಕೊಂಡು ಆಟವಾಡಲು ಶಾಲಾ ಮೈದಾನಕ್ಕೆ ಹೋಗಿವೆ. ಈ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿವೆ ಎಂದು ಹೇಳಲಾಗಿದೆ.
ಮೇತ ಮಕ್ಕಳ ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ವೈಯಕ್ತಿಕವಾಗಿ ಮಕ್ಕಳಿಗೆ ತಲಾ 25 ಸಾವಿರ ರೂ. ಕೊಟ್ಟಿದ್ದು, ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.