ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಲಕ್ಷಾಂತರ ಬಡವರ ಶ್ರೀರಕ್ಷೆ ಇದೆ. ನಮ್ಮ ಪಕ್ಷದ ಬಗ್ಗೆ ಯಾವತ್ತಿಗೂ ಲಘುವಾಗಿ ಮಾತನಾಡಬೇಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜರಾಜೇಶ್ವರಿ ನಗರ ವಾರ್ಡ್ನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2018ರಲ್ಲಿ ನನ್ನ ಬಗ್ಗೆ ಲಘುವಾಗಿ ಮಾತನಾಡಿ ಬಳಿಕ ನನ್ನ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿ ಆಗಿ ಎಂದು ಬೇಡಿಕೊಂಡಿರುವುದು ನೆನಪಿರಲಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇನ್ನು ನಿಖಿಲ್ಗೆ ಮುನಿರತ್ನ ಗಾಡ್ಫಾದರ್ ಅಲ್ವಾ ಎಂದು ಕೇಳಿದ್ರಂತೆ, ಅವನ್ಯಾರು ನಮಗೆ ಗಾಡ್ಫಾದರ್ ಆಗೋದಕ್ಕೆ. ಯಾವತ್ತಿದ್ದರೂ ನಮ್ಮ ಗಾಡ್ಫಾದರ್ ಅಂದರೆ ಜನಗಳೆ ಎಂದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇವತ್ತು ಮೋದಿಯವರು ಭಾರತವನ್ನು ಬಾಂಗ್ಲಾದೇಶದ ಜೊತೆ ತಲಾ ಆದಯದಲ್ಲಿ ಪೈಪೋಟಿ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಕೊರೊನಾ ಕಾಲದಲ್ಲಿ ದೀಪ ಬೆಳಗಿಸಿ, ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದರು. ಆದರೆ, ಬಿಜೆಪಿಯವರು ತಮ್ಮ ಮನೆಗೆ ದೀಪ ಬೆಳಗಿಸಿಕೊಂಡರೆ ಹೊರತು ಜನರ ಜೀವನಕ್ಕೆ ದೀಪ ಬೆಳಗಿಸಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರವನ್ನು ಪ್ರಧಾನಿ ಮೋದಿ ಬಂದು 10 ಪರ್ಸೆಂಟ್ ಸರಕಾರ ಎಂದರು, ಕಾಂಗ್ರೆಸ್ನವರು ಬಿಜೆಪಿ ಸರ್ಕಾರವನ್ನು 10 ಪರ್ಸೆಂಟ್ ಗವರ್ನಮೆಂಟ್ ಎಂದರು. ಆದರೆ, ನಮ್ಮ ಸರ್ಕಾರವನ್ನು ಯಾರೂ ಪರ್ಸೆಂಟೇಜ್ ಸರ್ಕಾರ ಎಂದಿಲ್ಲ. ಬೆಂಗಳೂರು ಹಾಗೂ ಮೈಸೂರು ಹೊರವಲಯದ ಅಭಿವೃದ್ಧಿಗಾಗಿ 2006ರಲ್ಲಿ 25 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ಅದರ ಪ್ರತಿಫಲವೇ ಆರ್ಆರ್ ನಗರದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.
ಇನ್ನು, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಮಾರಾಟ ಆಗಿರೋರು ನಾವಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ನವರು. ಕುಮಾರಣ್ಞನವರು ಈ ಕ್ಷೇತ್ರಕ್ಕೆ 450 ಕೋಟಿ ರೂ. ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಅವರ ಮುಖ ನೋಡಿ ಜೆಡಿಎಸ್ಗೆ 65,000 ವೋಟ್ ಬಿದ್ದಿದ್ದಲ್ಲ. ರಾಮಚಂದ್ರಪ್ಪ ಅಂತ ಹೆಸರು ಇಟ್ಕೊಂಡು ರಾವಣನ ಕೆಲಸ ಅವರು ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದು ತಪ್ಪಾ ಎಂದು ಪ್ರಶ್ನಿಸಿದರು.