NEWSಆರೋಗ್ಯನಮ್ಮರಾಜ್ಯಶಿಕ್ಷಣ-

ವೈದ್ಯ ಪಿಜಿ ವಿದ್ಯಾರ್ಥಿಗಳ ಪರೀಕ್ಷಾ ಮರು ಮೌಲ್ಯಮಾಪನಕ್ಕೆ ಎಎಪಿ ಆಗ್ರಹ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಅತ್ಯಂತ ಮಹತ್ವದ ಸೇವೆ ಸಲ್ಲಿಸಿದವರೆಂದರೆ ಆರೋಗ್ಯ ಕಾರ್ಯಕರ್ತರು. ಅವರಲ್ಲಿ ಬಹುತೇಕರು ತಮ್ಮ ಕುಟುಂಬವನ್ನೇ ನಿರ್ಲಕ್ಷಿಸಿ ಸಮಾಜದ ಸೇವೆಗೆ ನಿಂತರು.

ಇಂತಹ ನಿಸ್ವಾರ್ಥ ಕಾರ್ಯಕರ್ತರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಅವರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಕನಿಷ್ಠ ಅವರ ಹಕ್ಕಿನ ನ್ಯಾಯವೂ ಸಿಗುತ್ತಿಲ್ಲ ಎಂದು ರಾಜ್ಯ ಎಎಪಿ ಆರೋಪಿಸಿದೆ.

ಈ ವರ್ಷ ಎಂಡಿ ಪರೀಕ್ಷೆ ಬರೆದ ಬಹುತೇಕರು ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ಪರೀಕ್ಷೆಯ ಮೌಲ್ಯಮಾಪನ ಸರಿಯಾಗಿರದೇ ಹೋದಲ್ಲಿ ಮರುಮೌಲ್ಯಮಾಪನ ಮಾಡಿಸಿಕೊಳ್ಳಬೇಕಾದದ್ದು ಅವರ ಸಹಜ ಹಕ್ಕು. ಆರೋಗ್ಯ ಕಾರ್ಯಕರ್ತರ ಈ ಹಕ್ಕನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರಾಕರಿಸುತ್ತಿದೆ.

ತಾನು ಮಾಡಿದ್ದೇ ಸರಿ, ತನ್ನ ಮೌಲ್ಯಮಾಪಕರು ದೈವಾಂಶ ಸಂಭೂತರು, ಪ್ರಶ್ನಾತೀತರು ಎಂದು ರಾಆವಿವಿ ಭಾವಿಸಿದಂತಿದೆ. ಈ ಹಿಂದೆ ಇದೇ ರೀತಿ ಮೊಂಡುತನ ತೋರಿ, ಎರಡು ಬಾರಿ (2019, 2020) ಹೈಕೋರ್ಟ್ ‌ನಿಂದ ತಪರಾಕಿ ಹಾಕಿಸಿಕೊಂಡರೂ ರಾಆವಿವಿಗೆ ಬುದ್ದಿ ಬಂದಂತಿಲ್ಲ.

ಸರ್ಕಾರ ಈ ವಿಚಾರವಾಗಿ ಖಂಡಿತವಾಗಿಯೂ ಮಧ್ಯಪ್ರವೇಶಿಸಿ, ರಾಆವಿವಿಯ ದುಂಡಾವರ್ತನೆಗೆ ಆರೋಗ್ಯ ಕಾರ್ಯಕರ್ತರ ಹಕ್ಕನ್ನು ಎತ್ತಿಹಿಡಿಯಬೇಕೆಂದು ಆಮ್ ಆದ್ಮಿ ಪಕ್ಷ ಯುವ ಘಟಕದ ರಾಜ್ಯಾಧ್ಯಕ್ಷ ಮುಕುಂದ ಗೌಡ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸರ್ಕಾರದ ಮುಂದಿಟ್ಟ ಬೇಡಿಕೆಗಳು
1) ಯಾವ ಯಾವ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆಯೋ ತಕ್ಷಣವೇ ಅವರ ಮರುಮೌಲ್ಯಮಾಪನವನ್ನು ಸರಿಯಾಗಿ ಮತ್ತು ಪಾರದರ್ಶಕವಾಗಿ ಮಾಡಬೇಕು.

2) ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿರುವ ಸಿಬ್ಬಂದಿಗೆ ದಂಡ ವಿಧಿಸಿ, ಕೆಲಸದಿಂದ ವಜಾ ಮಾಡಬೇಕು.

3) ಕೋರ್ಟ್‌ಗೆ ಹೋಗಿ ಕಾಲವ್ಯಯ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕುವ ಬದಲು ತಕ್ಷಣವೇ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಕುಲಪತಿಗಳ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು‌.

ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪೂರೈಸದೇ ಹೋದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುಕುಂದ್ ಗೌಡ ಎಚ್ಚರಿಸಿದರು.

ಛಾತ್ರ ಯುವ ಸಂಘರ್ಷ ಸಮಿತಿಯ ಅಧ್ಯಕ್ಷ ಅಬ್ದುಲ್ ರಜಾಕ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ