ಪಿರಿಯಾಪಟ್ಟಣ: ಪೋಷಣ್ ಮಾಸಾಚರಣೆಯಲ್ಲಿ ಉತ್ತಮವಾಗಿ ಕೈತೋಟ ನಿರ್ವಹಣೆ ಮಾಡಿ ಜಾಗೃತಿ ಮೂಡಿಸುವ ಅಂಗನವಾಡಿಗಳಿಗೆ ಜಿಲ್ಲಾ, ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಿಡಿಪಿಒ ಕುಮಾರ್ ತಿಳಿಸಿದರು.
ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಷಣ್ ಮಾಸಾಚರಣೆ ಹಿನ್ನೆಲೆಯಲ್ಲಿ ಈ ವರ್ಷ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ನರೇಗಾ ಯೋಜನೆಯಡಿ ಪೌಷ್ಠಿಕ ಆಹಾರ ಉತ್ಪಾಧಿಸಲು ಕೈ ತೋಟಗಳ ನಿರ್ಮಿಸಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕತೆ ನೀಡುವ ನುಗ್ಗೆ, ಪಪ್ಪಾಯಿ, ಕೊತ್ತಂಬರಿ, ಪೇರಲ, ಬಾಳೆ, ಸೊಪ್ಪು, ಕರಿಬೇವು ಬೆಳೆಸುವ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ ಬೀಜ, ಗೊಬ್ಬರಕ್ಕೆ 1 ಸಾವಿರ ನೀಡಲಾಗುತ್ತಿದೆ.
ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ನೀಡುವುದು ಪೋಷಕರ ಕರ್ತವ್ಯವಾಗಿದ್ದು, ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆಯನ್ನು ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ. 8 ರಿಂದ 30ರ ವರೆಗೆ ಪೋಷಣ್ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನದಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 100 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡುವುದು.
ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ನಂದಿನಾಥಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನ್ನಪೂರ್ಣೇಶ್ವರಿ ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆಯ ಮೂಲೋತ್ಪಾಟನೆ ಕುರಿತಂತೆ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
0-5 ವರ್ಷದೊಳಗಿನ ಅಪೌಷ್ಟಿಕತೆಯ ಮಕ್ಕಳನ್ನು ಬೇಗನೆ ಗುರುತಿಸುವುದು, ಉನ್ನತ ಚಿಕಿತ್ಸೆಗೆ ಶಿಫಾರಸು, ಸೇವೆ ನೀಡುವ ಮೂಲಕ ಮಕ್ಕಳು ಗಂಭೀರ ಸ್ಥಿತಿಗೆ ತಲುಪುವುದನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ತಾ.ಪಂ.ಮಾಜಿ ಸದಸ್ಯ ಎ.ಟಿ.ರಂಗಸ್ವಾಮಿ ಮಾತನಾಡಿ ಅಪೌಷ್ಟಿಕತೆಯು ಗರ್ಭಿಣಿ ಮತ್ತು ಬಾಣಂತಿಯರಿಗೆ ಹೆಚ್ಚಾಗಿ ಕಂಡುಬರುತ್ತಿತ್ತು ರಾಷ್ಟ್ರೀಯ ಪೌಷ್ಟಿಕತೆ ಪೋಷಣ ಅಭಿಯಾನದಡಿಯಲ್ಲಿ ಇಂಥವರನ್ನು ಗುರುತಿಸಿ ಅವರಿಗೆ ಅಗತ್ಯವಾದ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ.
ತಾಯಿ ಮತ್ತು ಶಿಶುಗಳ ಮರಣದ ಪ್ರಮಾಣವನ್ನು ತಡೆಯುವ ಮೂಲಕ ದೇಶದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕಿದೆ. ಸರ್ಕಾರ ಶ್ರೀಮಂತ-ಬಡವ ಎಂಬ ತಾರತಮ್ಯವನ್ನು ಹೋಗಲಾಡಿಸಲು ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮಯ ಸಂಗತಿ ಎಂದರು.
ಗ್ರಾ.ಪಂ.ಅಧ್ಯಕ್ಷೆ ಸುಶೀಲಗಣೇಶ್, ಉಪಾಧ್ಯಕ್ಷ ಸ್ವಾಮಿ, ಸದಸ್ಯರಾದ ಅಶೋಕ, ನಾಗರಾಜು, ಸ್ವಾಮಿ, ಜ್ಯೋತಿ, ರತ್ನಮ್ಮ, ಮುಖಂಡರಾದ ಗಣೇಶ್, ಶಿಕ್ಷಕರಾದ ಧನರಾಜು, ಶ್ರೀನಿವಾಸ್, ವಸಂತಕುಮಾರಿ, ಲೀಸಾ, ಧನಲಕ್ಷ್ಮಿ ಕುಮಾರಿ, ಲೋಕನಾಥ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಮೈನಾ, ತಾರ, ಉಮೇಶ್, ತೀರ್ಥಕುಮಾರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.