ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಮಹಾಮಾರಿ ರಾಜ್ಯವನ್ನು ತೀವ್ರವಾಗಿ ಬಾಧಿಸುತ್ತಿದ್ದು, ಇದರ ನಡುವೆಯೇ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಈಗಾಗಲೇ ನಗರದಲ್ಲಿ ಒಟ್ಟು 14 ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಇಬ್ಬರನ್ನು ಬಲಿಪಡೆದಿದೆ.
ಅಷ್ಟೇ ಅಲ್ಲ ಬೆಳಗಾವಿಯಲ್ಲೂ ಬ್ಲ್ಯಾಕ್ ಫಂಗಸ್‌ನಿಂದ ಒಬ್ಬರು ಮೇತಪಟ್ಟಿದ್ದು, ಈಗ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದಿರುವ ಬಹುತೇಕರನ್ನು ಕಾಡುತ್ತಿದೆ ಈ ರೋಗ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಕಾಲಿಸಿಕೊಂಡಿರುವ ಬ್ಲ್ಯಾಕ್ ಫಂಗಸ್‌ನ 14 ಮಂದಿಯಲ್ಲಿ 7 ಮಂದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ, 7 ಮಂದಿ ಇಎನ್‍ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಇಬ್ಬರು ಮೃತಪಟ್ಟಿದ್ದರೆ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ಅವರು ಲಿವರ್, ಆಕ್ಸಿಜನ್, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. 14 ಜನ ಕೂಡ ಬೆಂಗಳೂರಿನವರಾಗಿದ್ದಾರೆ. ಕೋವಿಡ್‍ನಿಂದ ಬಳಲುತ್ತಿದ್ದು, ಡಯಾಬಿಟಿಸ್ ಹೆಚ್ಚು ಇದ್ದವರಿಗೆ ಬ್ಲ್ಯಾಕ್ ಫಂಗಸ್ ಬಂದಿದೆ ಎಂದು ವಿವರಿಸಿದ್ದಾರೆ.
ಇನ್ನು ಬೆಳಗಾವಿಯಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಹಿಡಕಲ್ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಬೀದರ್ ನಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಜತೆಗೆ ಈಗ ಕಾಣಿಸಿಕೊ೦ಡಿರುವ ಬ್ಲ್ಯಾಕ್ ಫಂಗಸ್‌ನ 15 ಮಂದಿಯಲ್ಲಿ ಒಬ್ಬರು ಅಸುನೀಗುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.