ಬೆಂಗಳೂರು: ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಕಳೆದ ನಾಲ್ಕು ದಿನಗಳಲ್ಲಿಯೇ ಬಿಬಿಎಂಪಿಗೆ ದಂಡದ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿದೆ.
ಓಮಿಕ್ರಾನ್ ತಡೆಗಾಗಿ ಮುಲಾಜಿಲ್ಲದೆ ದಂಡ ವಿಧಿಸುವಂತೆ ಬಿಬಿಎಂಪಿ ಮಾರ್ಷಲ್ಸ್ ಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮತ್ತು ಮಾಸ್ಕ್ ಧರಿಸದ ಜನರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಈ ರೂಪದಲ್ಲಿ ಕಳೆದ ನಾಲ್ಕು ದಿನಗಳಿಂದ 7 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಂದ 6,31,500 ರೂ. ಹಾಗೂ ಸಾಮಾಜಿಕ ಅಂತರ ಇಲ್ಲದೆ ಇರುವುದರಿಂದ 1,17,750 ರೂ. ದಂಡ ವಸೂಲಿ ಮಾಡಲಾಗಿದೆ. ನಾಲ್ಕು ದಿನದಲ್ಲಿ 2960 ಪ್ರಕರಣಗಳಲ್ಲಿ 7,49,250 ರೂ. ದಂಡ ವಸೂಲಿ ಮಾಡಿದ್ದಾರೆ. ಇದೂವರೆಗೂ 14,82,75,211 ರೂ. ದಂಡವನ್ನು ಪಾಲಿಕೆ ವಸೂಲಿ ಮಾಡಿದೆ.
ಇಂದಿನಿಂದ ಮಾರ್ಷಲ್ಸ್ ಗಳು ಮತ್ತಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಾಸ್ಕ್ ಹಾಕದೆ ರೋಡಿಗೆ ಇಳಿದರೆ ದಂಡ ಕಟ್ಟಬೇಕು. ಮಾರ್ಕೆಟ್, ಮಾಲ್, ಜನನಿಬಿಡ ಪ್ರದೇಶಗಳಲ್ಲಿ ಮಾರ್ಷಲ್ಸ್ ಕಾರ್ಯಾಚರಣೆ ನಡೆಸಲಿದ್ದಾರೆ.
ಓಮಿಕ್ರಾನ್ ವೈರಸ್ ತಡೆಗೆ ಬಿಬಿಎಂಪಿ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಮಾಸ್ಕ್ ಹಾಕದವರು ಯಾರೇ ಇದ್ದರೂ ದಂಡ ಕಟ್ಟಲೇ ಬೇಕಿದೆ.