ಬೆಂಗಳೂರು: ಕೋಲಾರದಲ್ಲಿ ನಾಲ್ಕೈದು ಮದುವೆ ಇತ್ತು. ಹೀಗಾಗಿ, ನಾನು ಫಾರ್ಮ್ ಹೌಸ್ನಿಂದ ಹೋಗುತ್ತಿರುವಾಗ 8 ಜನ ಏಕಾಏಕಿ ಬಂದು ನನ್ನ ಕಾರಿನ ಮೇಲೆ ಅಟ್ಯಾಕ್ ಮಾಡಿದರು. ಕಾರಿನ ಬಾಗಿಲು ತೆಗೆದು ನನಗೆ ಮಂಕಿ ಕ್ಯಾಪ್ ಹಾಕಿದರು. ನಮ್ಮ ಕಾರಿನ ಡ್ರೈವರ್ಗೆ ಮಚ್ಚಿನಲ್ಲಿ ಹೊಡೆದರು. 30 ಕೋಟಿ ರೂ. ಕೊಡುವಂತೆ ಟಾರ್ಚರ್ ಕೊಟ್ಟರು. ನಂತರ ಕಾಡಿಗೆ ಕರೆದೊಯ್ದು ಮೂರು ಗಂಟೆಯವರೆಗೂ ಹೊಡೆದರು ಎಂದು ನಡೆದ ಘಟನೆಯನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ವಿವರಿಸಿದ್ದಾರೆ.
ನಮ್ಮನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ವರ್ತೂರು ಪ್ರಕಾಶ್ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದರು. ಇಂದು ಖುದ್ದು ಮಾಧ್ಯಮಗಳ ಮುಂದೆ ಬಂದು, ಅಲ್ಲದೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಹಾಗೇ, ತಮಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಕಾಡಿನೊಳಗೆ ಟಾರ್ಚರ್ ಕೊಟ್ಟ ನಂತರ ನನ್ನನ್ನು ಬೇರೆ ಜಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕೂಡ ನನ್ನ ಮುಖಕ್ಕೆ ಹಾಕಿದ್ದ ಮಂಕಿ ಕ್ಯಾಪ್ ತೆಗೆಯಲಿಲ್ಲ. ಅವರ ಹಿಂಸೆ ತಾಳಲಾರದೆ ಕೋಲಾರದ ಸ್ನೇಹಿತರಿಗೆ ಕರೆ ಮಾಡಿ 50 ಲಕ್ಷ ರೂ. ತಲುಪಿಸಿದೆ ಎಂದು ತಿಳಿಸಿದ್ದಾರೆ.
ಡ್ರೈವರ್ ತಲೆಗೆ ಮಚ್ಚಿನಲ್ಲಿ ಹೊಡೆದಿದ್ದರಿಂದ ಅವನು ಕೆಳಗೆ ಬಿದ್ದ. ನಂತರ ಅವನು ಪೊದೆಯಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾದ. ಕೊನೆಗೆ ಶಿವನಾಪುರದ ಹೈಸ್ಕೂಲ್ ಗ್ರೌಂಡ್ನಲ್ಲಿ ನನ್ನನ್ನು ಬಿಟ್ಟು ಅಪಹರಣಕಾರರು ಎಸ್ಕೇಪ್ ಆದರು. ಕೊಲೆ ಬೆದರಿಕೆ ಹಾಕಿದ್ದರಿಂದ ನಾನು ತುಂಬ ಭಯ ಪಟ್ಟಿದ್ದೆ. ಸೋಮವಾರ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದೆ ಎಂದು ಹೇಳಿದರು.
ನನಗೆ ಒಂದು ಲಕ್ಷ ರೂ. ಸಾಲವೂ ಇಲ್ಲ. ನಾನು ಯಾವುದೇ ವ್ಯವಹಾರಗಳನ್ನೂ ಮಾಡಿಲ್ಲ. ಇದು ಬೇರೆ ರಾಜ್ಯದವರು ಮಾಡಿದ ಕೃತ್ಯವಲ್ಲ. ಬೆಂಗಳೂರಿನ ಅಪಹರಣಕಾರರೇ ಮಾಡಿರುವ ಕೆಲಸ. ನನಗೆ ಯಾರೊಂದಿಗೂ ರಾಜಕೀಯ ದ್ವೇಷ ಇಲ್ಲ. ಇದು ಯಾರೋ ದುಡ್ಡಿಗೋಸ್ಕರ ಮಾಡಿರೋ ಕೆಲಸ ಎಂದು ವರ್ತೂರು ಸ್ಪಷ್ಟಪಡಿಸಿದ್ದಾರೆ.
ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೆ, ನನ್ನ ಕುಟುಂಬದವರಿಗೆ ರಕ್ಷಣೆ ನೀಡಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಎಂದು ಮನವಿ ಮಾಡಿದ್ದೇನೆ. ನನ್ನ ಮುಂದೆಯೇ ಬೊಮ್ಮಾಯಿ ಅವರು ಕಮಿಷನರ್ ಬಳಿ ಮಾತನಾಡಿದ್ದಾರೆ. ಜತೆಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳು ಸಿಕ್ಕಿಬೀಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವರ್ತೂರು ತಿಳಿಸಿದ್ದಾರೆ.