ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ನಗರದ ಮುನ್ಸಿಪಾಲ್ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 21ರಂದು ನಡೆದ ಮಹಾ ಪಂಚಾಯತ್ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ಅಧ್ಯಕ್ಷ ರಾಕೇಶ್ ಟಿಕಾಯತ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಹೋರಾಟ ಮಾಡಬೇಕಿದೆ ನಾವು ದೆಹಲಿಯಲ್ಲಿ ಹೋರಾಟಕ್ಕೆ 3ಲಕ್ಷ ಟ್ರ್ಯಾಕ್ಟರ್ ತಂದಿದ್ದೆವು. ನಿಮ್ಮ ನಿಮ್ಮ ಊರುಗಳಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಅಭ್ಯಾಸ ಮಾಡಿಕೊಳ್ಳಿ. ದೆಹಲಿ ಮಾದರಿಯಲ್ಲೇ ಟ್ರ್ಯಾಕ್ಟರ್ ಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಎಂದು ರೈತರನ್ನು ಉದ್ರೇಕಗೊಳಿಸುವ ಮಾದರಿಯಲ್ಲಿ ಭಾಷಣ ಮಾಡಿದ ಆರೋಪದಡಿ ಐಪಿಸಿ ಕಲಂ 154ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಳವಳಿ ಮಾಡುವವರಿಗೆ ಪ್ರಕರಣಗಳು ಹೊಸದೇನಲ್ಲ ಟಿಕಾಯತ್ ಅವರು ಉದ್ರೇಕದ ಭಾಷಣ ಮಾಡಿಲ್ಲ. ಹೋರಾಟವನ್ನು ಹತ್ತಿಕ್ಕಲು ಸರಕಾರ ಹುನ್ನಾರ ನಡೆಸಿದೆ. ಸರ್ಕಾರ ಪೊಲೀಸರನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದನ್ನು ಜಿಲ್ಲಾ ರೈತಸಂಘ ದಿಂದ ಖಂಡಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ಮಾರ್ಚ್ 21ರಂದು ರೈತ ಮಹಾ ಪಂಚಾಯತ್ ನಡೆದಿದೆ. ಎರಡು ದಿನ ಬಿಟ್ಟು (ಮಾರ್ಚ್ 23) ಎಫ್‌ಐಆರ್ ಹಾಕುತ್ತಾರೆ ಎಂದರೆ ಇದು ಉದ್ದೇಶಪೂರ್ವಕ ಅಂತ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಶಿವಮೊಗ್ಗ ಮತ್ತು ಹಾವೇರಿ ಎರಡು ಕಡೆ ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ, ತಂತ್ರಗಳಿಂದ ಹೋರಾಟ ಮಣಿಸಲು ಸಾಧ್ಯವಿಲ್ಲ ಮಾರ್ಚ್ 26 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಜಿಲ್ಲಾ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ತಿಳಿಸಿದ್ದಾರೆ.