ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ಉತ್ತುಂಗದ ನಡುವೆಯೂ ರಾಜ್ಯ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 62. 085 ಕೋಟಿ ರೂ. ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಫೆಬ್ರವರಿಯಲ್ಲಿ ವಿಶ್ವ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೆ ಸಿದ್ಧತೆ ನಡೆಯುತ್ತಿರುವಂತೆಯೇ, ರಾಜ್ಯದ ಈ ಸಾಧನೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ಇನ್ನು 2019-20ರಲ್ಲಿ 30,746 ಕೋಟಿ ಆಕರ್ಷಣೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದ ರಾಜ್ಯ 2020-21 ರಲ್ಲಿ 56, 884 ಕೋಟಿ ಬಂಡವಾಳವನ್ನು ಆಕರ್ಷಿಸಿದೆ ಎಂದರು.
ಕೈಗಾರಿಕಾ ಬೆಳವಣಿಗೆಗೆ ಭೂಮಿ ಮತ್ತು ಕಾರ್ಮಿಕ ಕಾನೂನು, ಅಫಿಡವಿಟ್ ಆಧಾರಿತ ಕ್ಲಿಯರೆನ್ಸ್ ಸೇರಿದಂತೆ ಅನೇಕ ಸುಧಾರಣೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಮುಂಬರುವ ದಿನಗಳಲ್ಲಿ ಎಲ್ಲ ಅಂಶಗಳಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಿರುವುದಾಗಿ ನಿರಾಣಿ ಭರವಸೆ ನೀಡಿದರು.
ಕೈಗಾರಿಕಾ ಉದ್ದೇಶಗಳಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಪಡೆದ ಜಮೀನು ಬಳಕೆ ಮಾಡದವರಿಗೆ ನೋಟಿಸ್ ನೀಡಲಾಗುವುದು, ಕೈಗಾರಿಕಾ ಉದ್ದೇಶಕ್ಕೆ ಜಮೀನು ಪಡೆದು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ಅಂತಹ ಜಮೀನನ್ನೂ ಹಿಂದಕ್ಕೆ ಪಡೆಯಲಾಗುವುದು ಎಂದು ನಿರಾಣಿ ಹೇಳಿದರು.
ಇನ್ನು ದೇಶದ ಒಟ್ಟು 20 ರಾಜ್ಯಗಳ ಸಾಧನೆಯನ್ನು ಪರಗಣಿಸಿ ಈ ಶ್ರೇಯಾಂಕ ನೀಡಲಾಗಿದೆ. ಹೂಡಿಕೆ ಉತ್ತೇಜನ ಪ್ರಚಾರಕ್ಕೆ ಸಂಬಂಧಿಸಿದ ಒಟ್ಟು 8 ವಿಭಾಗಗಳ ಪೈಕಿ ಶೇ. 4ರಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಶೇಕಡಾ 100 ಅಂಕಗಳನ್ನು ಪಡೆದಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಪೂರಕ ಸೌಲಭ್ಯ ಒದಗಿಸುವ ಏಜೆನ್ಸಿ, ಇನ್ವೆಸ್ಟ್ ಇಂಡಿಯಾದ ರಾಜ್ಯವಾರು ಐಪಿಎ( ಹೂಡಿಕೆ ಪ್ರಚಾರ ಏಜೆನ್ಸಿ) ಶ್ರೇಯಾಂಕದಡಿ ಕರ್ನಾಟಕ ಉದ್ಯೋಗ ಮಿತ್ರ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ನಿರ್ವಹಣೆ ಮಾಡಿದೆ ಎಂದರು.