ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಪ್ರತಿಭಟನಾ ನಿರತ ನೌಕರರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ತಮ್ಮ ಪ್ರತಿಭಟನೆಯಿಂದ ಆಗುತ್ತಿರುವ ಅನನುಕೂಲತೆಯನ್ನು ಪರಿಗಣಿಸಬೇಕು ಮತ್ತು ಮುಷ್ಕರ ನಿರತ 26 ಒಕ್ಕೂಟಗಳ ಪ್ರತಿನಿಧಿಗಳನ್ನು ಸರ್ಕಾರ ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಬಾಂಬೆ ಹೈಕೋರ್ಟ್ (ಎಚ್‌ಸಿ) ನಿರ್ದೇಶನ ನೀಡಿದೆ.
ತ್ರಿಸದಸ್ಯ ಎಚ್‌ಸಿ-ರಚಿತ ಸಮಿತಿ ಮತ್ತು ಒಕ್ಕೂಟಗಳ ಪ್ರತಿನಿಧಿಗಳು ಮುಂದಿನ ಕೆಲವೇ ದಿನಗಳಲ್ಲಿ ನೌಕರರ ಕುಂದುಕೊರತೆಗಳು ಮತ್ತು ಬೇಡಿಕೆಗಳಿಗೆ ಒಂದು ಅಂತಿಮ ನಿರ್ಧಾರಕ್ಕೆ ಬರುವ ಮೂಲಕ ಡಿಸೆಂಬರ್ 20 ರೊಳಗೆ ಸಮಸ್ಯೆಯನ್ನು ಸೌಹಾರ್ದಯುತ ಬಗೆಹರಿಸುವಂತೆ ಸೂಚನೆ ನೀಡಿದೆ.
ಈಗಾಗಲೇ ಶಾಲೆ ಮತ್ತು ಕಾಲೇಜುಗಳು ಆರಂಭವಾಗಿವೆ. ಈ ನಡುವೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಇದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ ಮತ್ತು ಎಸ್.ಎಂ. ಮೋದಕ್ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿದ್ದು, ಬಸ್‌ಗಳನ್ನು ಓಡಿಸಲು ಇಚ್ಛಿಸುವ ಎಂಎಸ್‌ಆರ್‌ಟಿಸಿಯ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಹಾಗೆ ಮಾಡಲು ಅವಕಾಶ ನೀಡಬೇಕು ಎಂದು ಸೋಮವಾರ ನಿರ್ದೇಶಿಸಿದೆ.
ಪ್ರತಿಭಟನಾನಿರತ ಯೂನಿಯನ್ ಸದಸ್ಯರು ಶಾಂತಿಯುತವಾಗಿ ನಿಮ್ಮ ಹೋರಾಟ ಮುಂದುವರಿಸಬಹುದು ಮತ್ತು ಹಿಂಸಾಚಾರಕ್ಕೆ ಆಸ್ಪದ ಕೊಡಬಾರದು ಎಂದು ನಿರೀಕ್ಷಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ. ಒಂದು ವೇಳೆ ನೌಕರರು ಹಿಂಸಾತ್ಮಕ ಮಾರ್ಗ ಅನುಸರಿಸರಿಸಿದರೆ ಅಂಥವರ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ತೆಗೆದುಕೊಳ್ಳಬಹುದು ಎಂದು ನಿರ್ದೇಶಿಸಿದೆ.
ವಿದ್ಯಾರ್ಥಿಗಳಿಗೆ ತೊಂದರೆ ನೀಡುವ, ಕರ್ತವ್ಯಕ್ಕೆ ಮರಳಲು ಸಿದ್ಧರಿರುವ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ತಡೆಯಲು ಪ್ರಯತ್ನಿಸುತ್ತಿರುವ ಒಕ್ಕೂಟಗಳು ಅಥವಾ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿ ಶ್ರೀರಾಮ ಮೋದಕ್ ಅವರ ವಿಭಾಗೀಯ ಪೀಠ, ನವೆಂಬರ್ 3 ರ ಮಧ್ಯರಾತ್ರಿಯಿಂದ ಮುಷ್ಕರ ನಡೆಸದಂತೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಮತ್ತು ಕೈಗಾರಿಕಾ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ನೌಕರರ ಸಂಘ ಮತ್ತು ಅದರ ಸದಸ್ಯರ ವಿರುದ್ಧ MSRTC ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿತು.
ನೌಕರರು ನಡೆಯುತ್ತಿರುವ ಮುಷ್ಕರದಿಂದ ವಿದ್ಯಾರ್ಥಿಗಳು ಮತ್ತು ದೂರದ ಸ್ಥಳಗಳಲ್ಲಿ ವಾಸಿಸುವವರಿಗೆ ತುಂಬ ತೊಂದರೆಯಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ಹಿರಿಯ ವಕೀಲ ಎಸ್.ಯು. ಕಾಮದಾರ್ ತಿಳಿಸಿದರು.
ಆಫ್‌ಲೈನ್ ತರಗತಿಗಳು ಪ್ರಾರಂಭವಾಗಿದ್ದರೂ, ಎಸ್‌ಟಿ ಬಸ್ ಸೇವೆಗಳು ಲಭ್ಯವಿಲ್ಲದ ಕಾರಣ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾಮದಾರ್ ವಾದ ಮಂಡಿಸಿದರು.
ಗ್ರಾಮಸ್ಥರು ಜೀವನೋಪಾಯಕ್ಕಾಗಿ ಸಮೀಪದ ನಗರಗಳಿಗೆ ಹೋಗಲು ಕಷ್ಟಪಡುತ್ತಿದ್ದಾರೆ ಎಂದು ದೂರಿದರು. ಸಮಿತಿಯು ನವೆಂಬರ್ 16 ರಂದು ಎರಡು ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಎರಡನೇ ವಿಚಾರಣೆಯನ್ನು ನಡೆಸಿದೆ ಮತ್ತು ಇತರ ಒಕ್ಕೂಟಗಳ ಪ್ರತಿನಿಧಿಗಳನ್ನು ಭೇಟಿ ಮಾಡುವುದನ್ನು ಮುಂದುವರಿಸಲಿದೆ ಎಂದು ಕಾಮದಾರ್ ಹೇಳಿದರು.
ಸಂಘಗಳು ಮತ್ತು ನೌಕರರನ್ನು ಪ್ರತಿನಿಧಿಸಿದ ವಕೀಲ ಗುಣರತನ್ ಸದಾವರ್ತೆ ಅವರು, ಮುಷ್ಕರ ಪ್ರಾರಂಭವಾದಾಗಿನಿಂದ ಆಜಾದ್ ಮೈದಾನದಲ್ಲಿ ಕುಳಿತಿರುವ ಪ್ರತಿಭಟನಾಕಾರರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸದ ಕಾರಣ ಮುಷ್ಕರ ನಿರತ ಎಸ್ಟಿ ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆ ರಾಜ್ಯವು ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.
ಆದಾಗ್ಯೂ, ತುರ್ತು ಪರಿಸ್ಥಿತಿಗಳಿಗಾಗಿ ಎರಡು ಆಂಬುಲೆನ್ಸ್‌ಗಳನ್ನು ಆಜಾದ್ ಮೈದಾನದಲ್ಲಿ ಇರಿಸಲಾಗಿದೆ ಮತ್ತು ಚಳವಳಿಗಾರರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿದೆ.
ಎರಡು ಕಡೆ ವಕೀಲರ ಅಹವಾಲುಗಳನ್ನು ಆಲಿಸಿದ ನ್ಯಾಯಾಲಯವು ಮುಷ್ಕರದಿಂದ “ವಿದ್ಯಾರ್ಥಿಗಳಿಗೆ” ನಷ್ಟ ಉಂಟಾಗುತ್ತಿದೆ ಆದ್ದರಿಂದ, ಚಳವಳಿಗಾರರು ಇದನ್ನು ಪರಿಗಣನೆಗೆ ತೆಗೆದುಕೊಂಡು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸಬೇಕು ಎಂದು ನಿರ್ದೇಶ ನೀಡಿತು.
ಕೆಲವು ಮುಷ್ಕರ ನಿರತ ನೌಕರರು ಕರ್ತವ್ಯಕ್ಕೆ ಮರಳಲು ಸಿದ್ಧರಿರುವುದರಿಂದ ವಿದ್ಯಾರ್ಥಿಗಳು ಮತ್ತು ಬಡವರ ಹಿತದೃಷ್ಟಿಯಿಂದ ನೌಕರರನ್ನು ಕರ್ತವ್ಯಕ್ಕೆ ಬರುವವರನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದರೆ ಸಂಘಗಳು ಮತ್ತು ಅವರ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶ ನೀಡಿದೆ.
ನ್ಯಾಯಾಲಯವು ಸಮಿತಿಯ ಸಭೆಗಳ ಪ್ರಗತಿ ವರದಿಯನ್ನು ಕೇಳಿದ್ದು, ಈ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಿದೆ.