NEWSದೇಶ-ವಿದೇಶಸಂಸ್ಕೃತಿ

ಮಗನನ್ನು ಕಳೆದುಕೊಂಡಿರಬಹುದು! ಆದರೆ ಲಕ್ಷಾಂತರ ಜನರ ಪ್ರಾಣ ಉಳಿಯಿತಲ್ಲ!  

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಗನನ್ನು ಕಳೆದುಕೊಂಡಿರಬಹುದು! ಆದರೆ ಲಕ್ಷಾಂತರ ಜನರ ಪ್ರಾಣ ಉಳಿಯಿತಲ್ಲ!  

ಮೇಲಿನ ಮಾತುಗಳನ್ನು ಹೇಳಿದ ಮಹಾನುಭಾವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಊ ಥಾಂಟರು!

ಅವರು ಹಾಗೆ ಹೇಳಲು ಕಾರಣವಾದ ಹೃದಯಸ್ಪರ್ಶಿ ಪ್ರಸಂಗವು ಇಲ್ಲಿದೆ. 1960ರ ದಶಕದ ಒಂದು ಮಹತ್ತರವಾದ ದಿನ. ಅಂದು ವಿಶ್ವಸಂಸ್ಥೆಯಲ್ಲಿ ಬಹು ಮುಖ್ಯವಾದ ಸಭೆಯೊಂದು ನಡೆಯುತ್ತಿತ್ತು. ಶೀತಲ ಮನಸ್ತಾಪವಿದ್ದ ಎರಡು ದೊಡ್ಡ ದೇಶಗಳ ಮಧ್ಯೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಎರಡೂ ದೇಶಗಳ ಸೇನೆಗಳು ಯುದ್ಧಕ್ಕೆ ಸಿದ್ಧವಾಗಿ ನಿಂತಿದ್ದವು.

ಯಾವಾಗ ಬೇಕಾದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸ್ಫೋಟಿಸಬಹುದಿತ್ತು. ಯುದ್ಧ ಘೋಷಣೆಯಾಗಬಹುದಿತ್ತು. ಲಕ್ಷಾಂತರ ಜನರ ಮಾರಣಹೋಮ ಆಗಬಹುದಿತ್ತು. ಅಂಥ ಯುದ್ಧವನ್ನು ನಿವಾರಣೆ ಮಾಡಿ ಶಾಂತಿಸ್ಥಾಪನೆಗಾಗಿ ವಿಶ್ವಸಂಸ್ಥೆಯ ಸಭೆ ಕೊನೆಯ ಪ್ರಯತ್ನ ಮಾಡುತ್ತಿತ್ತು.

ಆಗ ಊ ಥಾಂಟ್ ಅವರು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರು ಬರ್ಮೀಯರು ಮತ್ತು ಬೌದ್ಧಧರ್ಮೀಯರು. ಬಹಳ ಶಾಂತ ಸ್ವಭಾವದವರು. ತಮ್ಮ ಗುರುತರವಾದ ಕರ್ತವ್ಯದ ಬಗ್ಗೆ ಅರಿತಿದ್ದವರು. ಎರಡೂ ರಾಷ್ಟ್ರಗಳ ಪ್ರಮುಖರ ಸಭೆಯ ನಿರ್ವಹಣೆಯ ಜವಾಬ್ದಾರಿ ಊ ಥಾಂಟರದ್ದಾಗಿತ್ತು.

ಸಭೆ ನಡೆಯುತ್ತಿರುವಾಗ ಊ ಥಾಂಟರ ಕಾರ್ಯದರ್ಶಿ ಬಂದು ಒಂದು ಕಾಗದವನ್ನು ಅವರ ಕೈಗಿತ್ತರು. ಅದನ್ನೋದಿದ ಊ ಅವರ ಮುಖ ಕಪ್ಪಾಯಿತು. ಆದರೆ ಅವರು ಕಾಗದವನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಸಭೆಯನ್ನು ಮುಂದುವರಿಸಿದರು.

ಕೆಲವು ಗಂಟೆಗಳ ನಂತರ ಶಾಂತಿ ಸೂತ್ರವೊಂದು ಸಿದ್ಧವಾಯಿತು. ಎರಡೂ ದೇಶಗಳವರು ಶಾಂತಿ ಸೂತ್ರಕ್ಕೆ ಒಪ್ಪಿಕೊಂಡು, ಅದಕ್ಕೆ ಸಹಿ ಮಾಡಿ ಪರಸ್ಪರ ಕೈ ಕುಲುಕಿದರು. ಯುದ್ಧ ನಿವಾರಣೆಯಾಯಿತು. ಎಲ್ಲರೂ ಗಟ್ಟಿಯಾಗಿ ನಗುತ್ತ ಸಭೆಯಿಂದ ನಿರ್ಗಮಿಸುವಾಗ ಪ್ರಮುಖರೊಬ್ಬರು ಊ ಥಾಂಟರನ್ನು ‘ನಿಮ್ಮ ಆಪ್ತ ಸಹಾಯಕರು ಸಭೆಯ ಮಧ್ಯೆ ನಿಮಗೊಂದು ಕಾಗದ ಕೊಟ್ಟರಲ್ಲ. ಅದನ್ನೋದಿ ನಿಮ್ಮ ಮುಖ ಕಪ್ಪಾಯಿತು.

ಆದರೆ ನೀವದನ್ನು ಮಡಚಿ ಜೇಬಿನಲ್ಲಿ ಹಾಕಿಕೊಂಡು ಸಭೆ ಮುಂದುವರಿಸಿದಿರಿ. ಇದೀಗ ಸಭೆ ಯಶಸ್ವಿಯಾಗಿ ಮುಗಿದಿದೆ. ಆ ಕಾಗದದಲ್ಲಿ ಅಂಥದ್ದು ಏನಿತ್ತೆಂದು ನಾವು ತಿಳಿದುಕೊಳ್ಳಬಹುದೇ?’ ಎಂದು ಕೇಳಿದರು.

ಊ ಥಾಂಟರು ಏನೂ ಮಾತನಾಡದೆ ತಮ್ಮ ಜೇಬಿಗೆ ಕೈ ಹಾಕಿ ಕಾಗದವನ್ನು ಹೊರತೆಗೆದು ಪ್ರಮುಖರ ಕೈಗಿತ್ತರು. ಕಾಗದದಲ್ಲಿ ‘ನಿಮ್ಮ ಮಗ ಟಿನ್ ಮೌಂಗ್ ಥಾಂಟ್ ಅವರು ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಅವರ ಹೆಣ ಆಸ್ಪತ್ರೆಯ ಶವಾಗಾರದಲ್ಲಿದೆ’ ಎಂದು ಬರೆದಿತ್ತು.

ಪ್ರಮುಖರು ‘ಊ ಥಾಂಟರೇ! ನಿಮ್ಮದು ಎಂಥ ಕಲ್ಲು ಹೃದಯ? ಮಗ ಸತ್ತು ಹೆಣವಾಗಿ ಬಿದ್ದಿದ್ದರೂ ಸಭೆಯನ್ನು ಮುಂದುವರಿಸಿದಿರಲ್ಲಾ?’ ಎಂದರು. ಊ ಥಾಂಟರು ತಮ್ಮ ಎಂದಿನ ಮೆಲುದನಿಯಲ್ಲಿ ‘ನನ್ನ ಮಗ ಸತ್ತು ಹೋಗಿದ್ದ. ಹೆಣವಾಗಿ ಆಸ್ಪತ್ರೆಯಲ್ಲಿದ್ದ. ನಾನು ಅಲ್ಲಿಗೆ ಹೋಗಿದ್ದರೂ ಆತನನ್ನು ಬದುಕಿಸಲು ಸಾಧ್ಯವಿರಲಿಲ್ಲ.

ಆದರೆ ಎರಡು ದೇಶಗಳ ಮಧ್ಯೆ ಸ್ಫೋಟಕ ಪರಿಸ್ಥಿತಿಯಿತ್ತು. ಯುದ್ಧ ನಡೆದಿದ್ದರೆ ಲಕ್ಷಾಂತರ ಜನರ ಮಾರಣಹೋಮವಾಗುತ್ತಿತ್ತು. ಈಗ ಯುದ್ಧ ನಿವಾರಣೆಯಾಗಿದೆ. ಲಕ್ಷಾಂತರ ಜನರ ಪ್ರಾಣ ಉಳಿದಿದೆ.

ನಾನು ಒಬ್ಬ ಮಗನನ್ನು ಕಳೆದುಕೊಂಡಿರಬಹುದು. ಆದರೆ ಲಕ್ಷಾಂತರ ಜನರ ಪ್ರಾಣ ಉಳಿಯಲು ನನ್ನ ಪಾತ್ರ ಸಹಾಯಕವಾಯಿತೆಂಬ ಸಮಾಧಾನ ನನಗಿದೆ. ಈಗ ಆಸ್ಪತ್ರೆಗೆ ಹೋಗಿ ನನ್ನ ಮಗನ ಅಂತ್ಯಕ್ರಿಯೆಯ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿ ಹೊರಟರಂತೆ!

ಇಂಥ ಅಪರೂಪದ ಕರ್ತವ್ಯ ಪ್ರಜ್ಞೆಯನ್ನು ತೋರಿಸುತ್ತಿದ್ದ ಊ ಥಾಂಟರು (1909 ರಲ್ಲಿ ಜನಿಸಿ 1974ರವೆಗೆ ಬದುಕ್ಕಿದ್ದರು) ಹತ್ತು ವರ್ಷಗಳಷ್ಟು ಸುದೀರ್ಘ ಕಾಲ ವಿಶ್ವ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ