ಔರಂಗಾಬಾದ್ : ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ 28 ದಿನಗಳಿಂದ ನಡೆಯುತ್ತಿರುವ ಎಂಎಸ್‌ಆರ್‌ಟಿಸಿ ನೌಕರರ ಮುಷ್ಕರ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ.
ಈ ನಡುವೆ ಔರಂಗಾಬಾದ್ ಡಿಪೋದಲ್ಲಿ ಮುಷ್ಕರ ನಡೆಸಿದ್ದ ಮೂವರು ನೌಕರರನ್ನು ಬುಧವಾರ (ಇಂದು) ಅಮಾನತುಗೊಳಿಸಲಾಗಿದ್ದು, ಅಮಾನತುಗೊಂಡವರಲ್ಲಿ ಒಬ್ಬ ನಿರ್ವಾಹಕಿಯೂ ಕೂಡ ಇದ್ದಾರೆ.
ನಿಗಮದ ಅಧಿಕಾರಿಗಳ ಈ ಅಮಾನತು ಕ್ರಮವನ್ನು ಖಂಡಿಸಿರುವ ಮುಷ್ಕರ ನಿರತ ನೌಕರರು ನೀವು ಅಮಾನತು ಮಾಡುವುದಿದ್ದರೆ ಎಲ್ಲರನ್ನೂ ಸಾಮೂಹಿಕವಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ವೇಳೆ ಅಮಾನತು ಮಾಡಿದ ಅಧಿಕಾರಿಗಳಿಗೆ ಸಿಹಿ ವಿತರಿಸಿದರು.
ಇನ್ನು ಡಿಪೋನಲ್ಲಿ ಮುಷ್ಕರ ನಿರತರಲ್ಲಿ ಮೂವರನ್ನು ಅಮಾನತು ಮಾಡಿದ್ದರಿಂದ ನೀವು ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಿಮ್ಮ ಈ ನಿಲುವಿನಿಂದ ನಮ್ಮ ಹೋರಾಟಕ್ಕೆ ಇನ್ನಷ್ಟು ಆನೆ ಬಲ ಬಂದಂತಾಗುತ್ತಿದೆ ಎಂದು ಆಕ್ರೋಶ ಭರಿತ ಮಾತುಗಳಿಂದ ಅಮಾನತು ಮಾಡಿರುವುದನ್ನು ಖಂಡಿಸುವ ಮೂಲಕ ಎಚ್ಚರಿಕೆ ನೀಡಿದರು.
ಡಿಪೋದಲ್ಲಿ ಪ್ರತಿಭಟನೆ ಮಾಡುತ್ತಿದ್ದ ನೌಕರರಲ್ಲಿ ಕೇವಲ ಮೂವರನ್ನು ಏಕೆ ಅಮಾನತು ಮಾಡಿದ್ದೀರಿ ಎಂಬುವುದನ್ನು ಪ್ರಶ್ನಿಸಿದ ಮುಷ್ಕರ ನಿರತ ನೌಕರರು ನಮ್ಮನ್ನೂ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ಇನ್ನು ಅಮಾನತು ಕ್ರಮ ಜರುಗಿಸಿದ ಬಳಿಕ ನೌಕರರು ಅಮಾನತು ಮಾಡಿದ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಸಿಹಿ ವಿತರಿಸಿ ನಿಮ್ಮ ನಡೆಗೆ ದೇವರೆ ಉತ್ತರ ಕೊಡುತ್ತಾನೆ ಎಂದು ಹೇಳಿದರು.
ನಾವು ಇಂತಹ ಕ್ರಮಕ್ಕೆ ಬೆದರುವುದಿಲ್ಲ. ಒಬ್ಬಬ್ಬೊರನ್ನು ಅಮಾನತು ಮಾಡಿ ನೀವು ಏನು ಸಾಧಿಸಲು ಹೊರಟಿದ್ದೀರಿ, ಈ ಕ್ರಮ ಕೈಗೊಳ್ಳುವ ಬದಲು ಎಲ್ಲರನ್ನೂ ಒಮ್ಮೆಗೆ ಅಮಾನತುಗೊಳಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.
ಇನ್ನು ಸರ್ಕಾರ ಮತ್ತು ನಿಗಮ ಮುಷ್ಕರ ನಿಲ್ಲಿಸಲು ಬೇರೆ ಬೇರೆ ಪರಿಹಾರದ ಮಾತುಗಳನ್ನು ಆಡುವ ಬದಲು ಸರ್ಕಾರದೊಂದಿಗೆ ನಿಗಮವನ್ನು ವಿಲೀನಗೊಳಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಕಳೆದ 28 ದಿನಗಳಿಂದ ನಿರಂತರವಾಗಿ ಮುಷ್ಕರ ನಡೆಸುತ್ತಿದ್ದು ಸರ್ಕಾರ ನೌಕರರಿಗೆ ಒಳ್ಳೆಯದಾಗುವ ಮಾರ್ಗವನ್ನು ಅನುಸರಿಸುವ ಬದಲಿಗೆ ಇಲ್ಲಸಲ್ಲದ ಸಲಹೆ ಕೊಡುತ್ತ ಕಾಲ ಕಳೆಯುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನೌಕರರು ಖಡಕ್ ಆಗಿ ಎಚ್ಚರಿಕೆ ನೀಡಿದರು.
ಈ ನಮ್ಮ ಎಚ್ಚರಿಕೆಯನ್ನು ಸರ್ಕಾರ ಮತ್ತು ನಿಗಮ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗುತ್ತಿದೆ ಎಂದು ನೌಕರರು ತಿಳಿಸಿದರು.