ವಿಜಯಪಥ ಸಮಗ್ರ ಸುದ್ದಿ
ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು, ಈ ವೇಳೆ ಅಮೆರಿಕವು ವಿಶ್ವದ ವಿವಿಧ ದೇಶಗಳಿಗೆ 2.5 ಕೋಟಿ ಡೋಸ್ ಕೊವಿಡ್-19 ಲಸಿಕೆ ನೀಡಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಿದರು.
ಮೋದಿ ಅವರ ಜೊತೆಗೆ ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರ್ಯೂಸ್ ಮೆನ್ಯೂವಲ್, ಗ್ವಾಟೆಮಾಲಾ ಅಧ್ಯಕ್ಷ ಅಲೆಜಾಂಡ್ರೊ ಗಿಯಾಮ್ಮಟೈ, ಟ್ರಿನಿಡಾಡ್ ಹಾಗೂ ಟೊಬೆಗೊ ಪ್ರಧಾನಿ ಕೀತ್ ರೌಲೆ ಅವರೊಂದಿಗೂ ಕಮಲಾ ಮಾತನಾಡಿದರು.
ವಿಶ್ವಸಂಸ್ಥೆಯ ಕೊವ್ಯಾಕ್ಸ್ ಯೋಜನೆಯ ಮೂಲಕ ಅಥವಾ ನೇರವಾಗಿ ಈ ನಾಲ್ಕೂ ದೇಶಗಳು ಅಮೆರಿಕದಿಂದ ಲಸಿಕೆ ಸ್ವೀಕರಿಸಬಹುದಾಗಿದೆ ಎಂದು ಬೈಡನ್ ಆಡಳಿತ ಸ್ಪಷ್ಟಪಡಿಸಿದೆ. ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ 2.5 ಕೋಟಿ ಡೋಸ್ ಲಸಿಕೆ ಪೈಕಿ 1.9 ಕೋಟಿ ಡೋಸ್ ಕೊವ್ಯಾಕ್ಸ್ ಮೂಲಕ ವಿವಿಧ ದೇಶಗಳಿಗೆ ತಲುಪಲಿದೆ. ಉಳಿದ 60 ಲಕ್ಷ ಡೋಸ್ ಲಸಿಕೆಯು ಕೆನಡಾ, ಮೆಕ್ಸಿಕೊ, ಭಾರತ ಮತ್ತು ಕೊರಿಯಾ ದೇಶಗಳಿಗೆ ಪೂರೈಕೆಯಾಗಲಿವೆ ಎಂದು ತಿಳಿಸಿದರು.
‘ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರವು ಮೊದಲ 2.5 ಕೋಟಿ ಡೋಸ್ ಲಸಿಕೆಯನ್ನು ನಾಲ್ಕು ದೇಶಗಳೊಂದಿಗೆ ಹಂಚಿಕೊಳ್ಳಲು ಉದ್ದೇಶಿಸಿದೆ. ಜೂನ್ ಅಂತ್ಯದ ಒಳಗೆ 8 ಕೋಟಿ ಡೋಸ್ ಲಸಿಕೆಯನ್ನು ವಿಶ್ವದ ವಿವಿಧ ದೇಶಗಳಿಗೆ ಅಮೆರಿಕ ಸರಬರಾಜು ಮಾಡಲಿದೆ’ ಎಂದು ಕಮಲಾ ಹ್ಯಾರಿಸ್ ಮೋದಿ ಅವರಿಗೆ ತಿಳಿಸಿದರು.
‘ಅಮೆರಿಕ ಸರ್ಕಾರದೊಂದಿಗೆ ಭಾರತವು ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದೆ. ವಾಣಿಜ್ಯ ಮತ್ತು ಅನಿವಾಸಿ ಭಾರತೀಯರ ಬಗ್ಗೆ ನಾವು ಮಾತನಾಡಿದೆವು. ಭಾರತ-ಅಮೆರಿಕ ನಡುವಣ ಲಸಿಕೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಕೊವಿಡ್ ನಂತರದ ಜಾಗತಿಕ ಆರೋಗ್ಯ ಹಾಗೂ ಆರ್ಥಿಕ ಪುನಶ್ಚೇತನದ ಬಗ್ಗೆ ಚರ್ಚಿಸಿದೆವು’ ಎಂದು ಮೋದಿ ಹೇಳಿದ್ದು, ಮಾತುಕತೆ ನಂತರ ಮೋದಿ ಟ್ವೀಟ್ ಮಾಡಿ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದರು.