ಗೋದಾವರಿ: ಯುವಕನೊಬ್ಬ ಅಕ್ರಮವಾಗಿ ಸಾರಾಯಿ ಸಾಗಣೆ ಮಾಡಿದ್ದಾನೆ ಎಂದು ಆರೋಪಿಸಿ, ಪೊಲೀಸರು ಲಂಚ ಕೇಳಿದ್ದರು ಎನ್ನಲಾಗಿದೆ. ಇದರಿಂದ ಭಯಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಪ್ರಕರಣವನ್ನು ಇಲಾಖಾ ತನಿಖೆಗೆ ಒಪ್ಪಿಸಿ ಸಂಬಂಧಪಟ್ಟ, ಲಂಚ ಕೇಳಿದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಪೇದೆಯ ಮೇಲೆ ನಿಗಾ ಇಡದ ಸಬ್ಇನ್ಸ್ಪೆಕ್ಟರ್ನನ್ನು ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
2 ವರ್ಷಗಳ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ 23 ವರ್ಷದ ಈ ಯುವಕನಿಂದ ಪೊಲೀಸ್ ಕಾನ್ಸ್ಟೇಬಲ್ ಮೊದಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಬಳಿಕ ಅಷ್ಟು ಮೊತ್ತ ನೀಡಲಿಲ್ಲವೆಂದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದ ಎಂದು ತಿಳಿದುಬಂದಿದೆ.
ಮೃತ ಯುವಕನನ್ನು ಪಿ. ಮಜ್ಜಿ ಎಂದು ಗುರುತಿಸಲಾಗಿದ್ದು, ಈತ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಗ್ರಾಮೀಣ ಮಂಡಲದ ಪಿಡಿಮಗೋಯಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಮಜ್ಜಿ ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಎರಡು ವೈನ್ ಬಾಟಲ್ಗಳನ್ನು ಅಕ್ರಮವಾಗಿ ಸಾಗಿಸಿದ್ದಾನೆ ಎಂದು ಕೃಷ್ಣಾ ಜಿಲ್ಲೆಯ ಚಿಲಕಲು ಪೊಲೀಸ್ ಠಾಣೆಯಲ್ಲಿ 2020ನೇ ಸಾಲಿನಲ್ಲಿ ಪ್ರಕರಣ ದಾಖಲಾಗಿತ್ತು.
ಒಂದು ವರ್ಷದ ಬಳಿಕ ಚಿಲಕಲು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವರಾಮಕೃಷ್ಣ ಪ್ರಸಾದ್ ಎಂಬಾತ ಪ್ರಕರಣದ ಸಂಬಂಧ ಠಾಣೆಗೆ ಬರುವಂತೆ ಯುವಕ ಮಜ್ಜಿಗೆ ಸೂಚಿಸಿದ್ದರು. ಅದರಂತೆ ಆತ ಮಂಗಳವಾರ ಠಾಣೆಗೆ ತೆರಳಿದ್ದ. ಆ ವೇಳೆ ಮಜ್ಜಿ ವಿರುದ್ಧ ಪ್ರಕರಣ ಕೈಬಿಡಲು ಒಂದು ಲಕ್ಷ ರೂಪಾಯಿ ನೀಡುವಂತೆ ಸತಾಯಿಸಿದ್ದಾನೆ. ಇಲ್ಲವಾದಲ್ಲಿ ಡ್ರಗ್ಸ್ ಕೇಸ್ನಲ್ಲಿ ಫಿಟ್ ಮಾಡುವುದಾಗಿ ಧಮ್ಕಿ ಹಾಕಿ, ಕಾನ್ಸ್ಟೇಬಲ್ ಬೆದರಿಸಿದ್ದಾನೆ.
ಕಾನ್ಸ್ಟೇಬಲ್ ಶಿವರಾಮಕೃಷ್ಣ ಪ್ರಸಾದ್ ಬೆದರಿಕೆ, ಒತ್ತಡ ತಾಳಲಾರದೆ ಮಜ್ಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ರಾಜಮಂಡ್ರಿಗೆ ಮರಳಿದವನೆ ಸೆಲ್ಫಿ ವಿಡಿಯೋ ಮಾಡಿಟ್ಟು, ಅದರಲ್ಲಿ ವಿವರವಾಗಿ ಪ್ರಕರಣದ ವಿವರಣೆ ಹೇಳಿಕೊಂಡಿದ್ದಾನೆ. ಅದೇ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್ಪಿ ಸಿದ್ದಾರ್ಥ ಕೌಶಲ್ ಅವರು ಕಾನ್ಸ್ಟೇಬಲ್ ಶಿವರಾಮಕೃಷ್ಣ ಪ್ರಸಾದ್ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್ಇನ್ಸ್ಪೆಕ್ಟರ್ ದುರ್ಗಾಪ್ರಸಾದ್ ರಾವ್ನನ್ನೂ ಸಸ್ಪೆಂಡ್ ಮಾಡಿದ್ದಾರೆ.