ಬೆಂಗಳೂರು: ಕೇಂದ್ರ ಸರ್ಕಾರದಲ್ಲಿ ರಸಗೊಬ್ಬರ ಸಚಿವರಾಗಿದ್ದ ರಾಜ್ಯದ ಡಿ.ವಿ.ಸದಾನಂದಗೌಡ ಅವರು ತಮ್ಮ ಸಚಿವ ಸ್ಥಾನಕ್ಕೆ ನಿನ್ನೆ (ಜು.7) ರಾಜೀನಾಮೆ ನೀಡಿದ್ದಾರೆ. ಅವರ ಈ ರಾಜೀನಾಮೆ ಪ್ರಸ್ತುತ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿಯಾಡಲಿದೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ.
ರಾಜ್ಯದ ಅದರಲ್ಲೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಬ್ಬ ಕೇಂದ್ರ ಸಚಿವರಿಂದ ರಾಜೀನಾಮೆ ಪಡೆದಿರುವ ಬಿಜೆಪಿ ಕೇಂದ್ರದ ವರಿಷ್ಠರ ನಡೆ ನಿಗೂಢವಾಗಿದ್ದು, ಈ ರಾಜೀನಾಮೆ ಪಡೆದಿರುವ ಹಿಂದಿನ ಮರ್ಮ ಏನು ಎಂಬ ಪ್ರಶ್ನೆ ಬಿಜೆಪಿಯ ರಾಜ್ಯ ನಾಯಕರ ಮತ್ತು ಕಾರ್ಯಕರ್ತ ತಲೆಯನ್ನು ಇನ್ನಷ್ಟು ಬಿಸಿ ಮಾಡುತ್ತಿದೆ.
ಬಿಜೆಪಿ ಸ್ವತಃ ರೂಪಿಸಿಕೊಂಡಿರುವ ನಿಯಮದಂತೆ 75 ವರ್ಷ ವಯಸ್ಸಾದವರು ರಾಜಕೀಯ ನಿವೃತ್ತಿ ಪಡೆದು ಪಕ್ಷದ ಕಿರಿಯ ರಾಜಕಾರಣಿಗಳಿಗೆ ಸಲಹೆ ನೀಡಬೇಕು. ಆದರೆ ಕರ್ನಾಟಕದಲ್ಲಿ ಇದಕ್ಕೆ ಸ್ವಲ್ಪ ವಿರುದ್ಧವಾಗಿದ್ದು, 78 ವರ್ಷದ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಹೀಗಾಗಿ ಸದ್ಯ ಅವರ ಬದಲಾವಣೆ ಮಾಡಬೇಕು ಎಂಬ ಬಗ್ಗೆ ಬಿಎಸ್‌ವೈ ಅಧಿಕಾರ ವಹಿಸಿಕೊಂಡ ದಿನದಿಂದಲೂ ಪಕ್ಷದ ಕೆಲವರು ಒತ್ತಾಯ ಮಾಡುತ್ತಿದ್ದಾರೆ.
ಆದರೆ, ಅವರ ಒತ್ತಾಯಕ್ಕೆ ಕೇಂದ್ರದ ವರಿಷ್ಠರು ಕಾದು ನೋಡುವ ತಂತ್ರದಲ್ಲೇ ಈವರೆಗೂ ಮುಂದುವರಿದಿದ್ದಾರೆ. ಈ ನಡುವೆ ಬಿಎಸ್‌ವೈ ಮತ್ತು ಅವರ ಕುಟುಂಬದ ವಿರುದ್ಧ ಸ್ವಪಕ್ಷೀಯರೆ ಭ್ರಷ್ಟಾಚಾರ ಆರೋಪ ಮಾಡುವ ಮೂಲಕ ತಿರುಗಿ ಬೀಳುತ್ತಿದ್ದು, ಒಂದು ರೀತಿ ಪಕ್ಷಕ್ಕೆ ಮುಜುಗವರದ ಜತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೊಡೆತ ಬೀಳುವ ಸಾಧ್ಯತೆಯ ಹೇಚ್ಚಾಗಿದೆ. ಹೀಗಾಗಿ ಆ ಬಗ್ಗೆಯೂ ಅಳೆದು ತೂಗಿ ಈಗ ಅಂತಿಮ ನಿರ್ಧಾರಕ್ಕೆ ಬಂದಂತೆ ಕಾಣುತ್ತಿರುವ ಬಿಜೆಪಿ ಕೇಂದ್ರ ವರಿಷ್ಠರು ಸಿಎಂ ಬದಲಾವಣೆಗೆ ಮೂರ್ತ ಫಿಕ್ಸ್ ಮಾಡಲು ಸದ್ದಿಲ್ಲದೆ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ನಡುವೆ ಕೇಂದ್ರ ಸಚಿವ ಸ್ಥಾನಕ್ಕೆರಾಜೀನಾಮೆ ನೀಡಿರುವ ಡಿವಿಎಸ್ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ತರುವ ನಿಟ್ಟಿನಲ್ಲೂ ಕೇಂದ್ರ ವರಿಷ್ಠರು ಯೋಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಡಿವಿಎಸ್ ಅವರಿಗೆ ಸಿಎಂ ಪಟ್ಟ ಕಟ್ಟುವರೆ ಎಂಬ ಪ್ರಶ್ನೆ ಮೂಡುತ್ತಿದೆ.
ಇನ್ನು ಡಿವಿಎಸ್ ಅವರನ್ನು ಸಿಎಂ ಸ್ಥಾನಕ್ಕೆ ತಂದು ಕೂರಿಸಿದರೆ, ಪಕ್ಷದೊಳಗೆ ಈಗ ಬೂದಿ ಮುಚ್ಚಿದ ಕೆಂಡದಂತ್ತಿರುವ ಅಸಮಾಧಾನ ಇನ್ನಷ್ಟು ಜೋರಾಗಿ ಹೊಗೆಯಾಡಲು ಶುರುವಾಗುವುದೆ ಎಂಬ ದಿಕ್ಕಿನಲ್ಲೂ ಯೋಚನೆ ಮಾಡುತ್ತಿದೆ ಹೈ ಕಮಾಂಡ್.
ಈ ಎಲ್ಲರದ ನಡುವೆ ಮೊನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರಾಜ್ಯದ ಸಿಎಂ ಆಗಿ ಯಾರು ನಿರೀಕ್ಷೆ ಮಾಡದ ವ್ಯಕ್ತಿ ಬರಲಿದ್ದಾರೆ ಎಂಬ ಹೇಳಿಕೆಯೂ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಇತ್ತ ಡಿವಿಎಸ್ ಅವರಿಂದ ರಾಜೀನಾಮೆ ಪಡೆದು ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಿರುವುದು ಬೇರೊಂದು ಅರ್ಥವನ್ನೇ ಹುಟ್ಟು ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲರ ನಡುವೆ ಬಿಜೆಪಿ ಹೈ ಕಮಾಂಡ್ ಮುಂದಿನ ದಿನಗಳಲ್ಲಿ ಸಿಎಂ ಬದಲಾವಣೆ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳುವುದೋ ಎಂಬ ಕುತೂಹಲದಲ್ಲಿ ಪಕ್ಷದ ನಾಯಕರ ಜತೆಗೆ ರಾಜ್ಯದ ಜನರು ಎದುರು ನೋಡುತ್ತಿದ್ದಾರೆ.