- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಹೌದು! ಹೊಸ ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಜನರ ಅದರಲ್ಲೂಯುವ ಜನಾಂಗದ ಓಡಾಟ ಹೆಚ್ಚಾಗಿವುದು ಸರ್ವೇ ಸಾಮಾನ್ಯ ಹೀಗಾಗಿ ಮುಂದಿನ ನಡೆಯುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಹೀಗಾಗಿ 2021ರ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವವರಿಗೆ ಈ ವರ್ಷ ಕೊರೊನಾ ಅಡ್ಡಿಪಡಿಸಿದೆ. ಇದು ನಿಜಕ್ಕೂ ಒಂದು ರೀತಿಯ ಕಳವಳಕಾರಿಯ ವಿಚಾರವೇ. ಆದರೆ ಪೊಲೀಸ್ ಆಯುಕ್ತರ ಈ ನಿರ್ಧಾರ ಸಾವಿರಾರು ಯುವ ಜನರ ಆರೋಗ್ಯ ವೃದ್ಧಿಯಾಗಲಿದೆ ಜತೆಗೆ ಅವೆ ಮನೆಯ ಹಿರಿಯರ ಆರೋಗ್ಯವನ್ನು ಕಾಪಾಡುವಲ್ಲಿ ಇದು ಬಹು ಮುಖ್ಯವಾಗಿದೆ.
ಈ ಹಿಂದೆ ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲು ನಿರ್ಧರಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆಗೆ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆ ಬಳಿಕ ಬೆಂಗಳೂರಿನ 6 ಪ್ರಮುಖ ರಸ್ತೆಗಳು ಕಂಪ್ಲೀಟ್ ಬಂದ್ ಆಗಲಿವೆ. ಹೀಗಾಗಿ, ಈ ರಸ್ತೆಗಳತ್ತ ಬಂದರೆ ತೊಂದರೆ ಅನುಭವಿಸಬೇಕಾದೀತು. ಬೆಂಗಳೂರಿನ ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರೋಡ್, ರೆಸಿಡೆನ್ಸಿ ರೋಡ್, ರೆಸ್ಟ್ ಹೌಸ್ ಪಾರ್ಕ್ ರೋಡ್ಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್ ಮಾಡಲಾಗುವುದು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಕೂಡ ಸಂಪೂರ್ಣ ಬಂದ್ ಆಗಲಿವೆ. ಜೊತೆಗೆ ನಗರದ ಎಲ್ಲಾ ಫ್ಲೈ ಓವರ್ ಗಳು ಕೂಡ ಬಂದ್ ಆಗಲಿವೆ.
ಒಂದೆಡೆ ಹೊಸ ವರ್ಷಾಚರಣೆ, ಮತ್ತೊಂದೆಡೆ ರೂಪಾಂತರ ಕೊರೊನಾ ಹಾವಳಿಯಿಂದ ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಕೂಡ ಹೆಚ್ಚಾಗಿದೆ. ನಿನ್ನೆ ತಡರಾತ್ರಿಯಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಾಹನಗಳ ಮಾಹಿತಿ ಪಡೆಯುತ್ತಿದ್ದ ಪೊಲೀಸರು ಯಾವ ಕಾರಣಕ್ಕಾಗಿ ಬಂದಿದ್ದೀರಿ, ಎಲ್ಲಿಗೆ ಹೋಗುತ್ತಿದೀರಾ, ಉದ್ದೇಶವೇನು ಎಂದು ಮಾಹಿತಿ ಕಲೆ ಹಾಕಿದ್ದಾರೆ. ವಾಹನಗಳ ದಾಖಲೆ, ಚಾಲಕರ ಮಾಹಿತಿ, ಇನ್ಶೂರೆನ್ಸ್ ತಪಾಸಣೆ ಮಾಡಿದ್ದಾರೆ. ಹಾಗೇ, ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ.