ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯ ರುಂಡ ಕತ್ತರಿಸಿ ಮುಂಡವನ್ನು ಗೋಣಿಚೀಲದಲ್ಲಿ ಹಾಕಿ ಸ್ಮಶಾನ ಸಮೀಪದ ಕಸ ಬಿಸಾಡುವ ಸ್ಥಳದಲ್ಲಿ ಎಸೆದು ಹೋಗಿರುವ ಘಟನೆ ಮೀರತ್‌ನಲ್ಲಿ ನಡೆದಿದೆ.
ಕಸ ಬಿಸಾಡುವ ಸ್ಥಳದಲ್ಲಿ ಎಸೆದಿದ್ದ ಚೀಲದಲ್ಲಿ ಮಹಿಳೆಯ ಮುಂಡವನ್ನು ಪ್ರಾಣಿಗಳು ಎಳೆದಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಿಸಾರೆ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಹುಲ್ಲಾಪುರ್ ನಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನದ ಬಳಿ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
ಸುಮಾರು 30 ವರ್ಷದ ಮಹಿಳೆಯ ಶವವಾಗಿದ್ದು, ಪರಿಚಯವಿರುವ ವ್ಯಕ್ತಿಗಳೇ ಈ ಕೃತ್ಯವನ್ನು ಎಸಗಿರುವ ಶಂಕಿಯಿದೆ. ಮೃತ ಮಹಿಳೆಯ ಗುರುತು ಪತ್ತೆಯಾಗದ ರೀತಿಯಲ್ಲಿ ಶಿರಚ್ಛೇಧನ ಮಾಡಲಾಗಿದೆ. ಗೋಣಿಚೀಲದಲ್ಲಿ ತುಂಬಿ ಮೃತದೇಹ ಎಸೆಯಲಾಗಿದ್ದು ಆರೋಪಿಗಳ ಪತ್ತೆಗೆ ತಂಡ ರಚಿಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.
ಉತ್ತರದ ಪ್ರದೇಶದ ಮೀರತ್ ನಲ್ಲಿ ಪತ್ತೆಯಾದ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹವು ಪತ್ತೆಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ, ಮೃತದೇಹವನ್ನು ಎಸೆದು ಹೋಗಿರುವವರು ಯಾರು ಎಂಬುದರ ಬಗ್ಗೆ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.