ಮುಂಬೈ: ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆ ಪ್ರಕರಣ ಸಂಬಂಧ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಶನಿವಾರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಬಾಂಬೆ ಹೈಕೋರ್ಟ್ ಸೋಮವಾರಕ್ಕೆ ಆದೇಶ ಕಾಯ್ದಿರಿಸಿತ್ತು. ಆದರೆ ಇಂದು ತನ್ನ ಆದೇಶದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಇಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳಾದ ಫೆರೋಜ್ ಶೇಖ್ ಹಾಗೂ ನಿತೀಶ್ ಸರ್ದಾ ಅವರನ್ನು ಮಹಾರಾಷ್ಟ್ರದ ಅಲಿಬಾಗ್ ಪೊಲೀಸರು ನವೆಂಬರ್ 4 ರಂದು ಬಂಧಿಸಿದ್ದರು. ಆರೋಪಿಗಳ ಕಂಪನಿಗಳು ಇವರಿಗೆ ನೀಡಬೇಕಾಗಿದ್ದ ಬಾಕಿಯನ್ನು ನೀಡಿರಲಿಲ್ಲ ಎಂಬ ಆರೋಪ ಈ ಮೂವರ ಮೇಲಿದೆ.
ಬಂಧನದ ನಂತರ ಅಲಿಬಾಗ್ ಸೆಷನ್ಸ್ ನ್ಯಾಯಾಲಯ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆರಂಭದಲ್ಲಿ ಅವರನ್ನು ಸ್ಥಳೀಯ ಶಾಲೆಗೆ ಕರೆದೊಯ್ಯಲಾಗಿತ್ತು. ಈ ಶಾಲೆಯನ್ನು ಅಲಿಬಾಗ್ ಕಾರಾಗೃಹದ ಕೋವಿಡ್-19 ಕೇಂದ್ರವಾಗಿ ಬಳಸಲಾಗುತ್ತಿದೆ. ಇಲ್ಲಿ ಮೊಬೈಲ್ ಬಳಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಂತರ ಅವರನ್ನು ತಲೋಜ ಜೈಲಿಗೆ ವರ್ಗಾಯಿಸಲಾಗಿತ್ತು.
ಮಧ್ಯಂತರ ಜಾಮೀನು ಕೋರಿ ಗೋಸ್ವಾಮಿ ಶನಿವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಪರ ವಕೀಲ ಹರೀಶ್ ಸಾಳ್ವೆ ಹೇಬಿಯಸ್ ಕಾರ್ಪಸ್ (ವ್ಯಕ್ತಿಯೊಬ್ಬರು ಮೂಲಭೂತ ಹಕ್ಕುಗಳಲ್ಲಿ ವಂಚಿತರಾದಾಗ ನೇರವಾಗಿ ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ಮೊರೆ ಹೋಗಿ ತನ್ನ ಹಕ್ಕುಗಳನ್ನು ಮರು ಸ್ಥಾಪಿಸಲು ಸಂವಿಧಾನ ನೀಡಿರುವ ಅವಕಾಶ) ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಇದಕ್ಕೆ ಮಹಾರಾಷ್ಟ್ರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು.
ವಾದ ವಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್, ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಹೋಗುವಂತೆ ಸೂಚಿಸಿದೆ. ನಾಲ್ಕು ದಿನಗಳ ಒಳಗೆ ಜಾಮೀನು ಅರ್ಜಿಯ ಬಗ್ಗೆ ಸೆಷನ್ಸ್ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ. ಹೀಗಾಗಿ ಗೋಸ್ವಾಮಿ ಇದೀಗ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.