ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯನ್ನು ಭಾನುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕವಾಗಿ ನೆರವೇರಿಸಿದರು.
ಅರಮನೆಯ ಆನೆ ಬಾಗಿಲಿಗೆ ಬೆಳಗ್ಗೆ 6 ಗಂಟೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಿದವು. ಮುಂಜಾನೆ ಜರುಗಿದ ಚಂಡಿ ಹೋಮಕ್ಕೆ ಯದುವೀರ್ ಪೂರ್ಣಾಹುತಿ ಅರ್ಪಿಸಿದರು.
ಇದಕ್ಕೂ ಮುನ್ನ ಮುಂಜಾನೆ 5.28 ರಿಂದ 6.48 ಗಂಟೆಯೊಳಗೆ ಸಲ್ಲುವ ಶುಭ ಮಹೂರ್ತದಲ್ಲಿ ಅರಮನೆಯ ಆಯುಧಗಳನ್ನು ರಥ ವಾಹನದಲ್ಲಿ ಆನೆ, ಕುದುರೆ, ಒಂಟೆ ಮತ್ತು ಹಸುವಿನೊಡನೆ ಸೋಮೇಶ್ವರ ದೇವಾಲಯಕ್ಕೆ ತರಲಾಯಿತು.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಅರಮನೆಯ ಆನೆ ಬಾಗಿಲಿಗೆ ತರಲಾಯಿತು. ನಂತರ ಶುಭ ಮಹೂರ್ತದಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಅವರು ರಾಜ ಮಹಾರಾಜರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದರು.
ತರುವಾಯ ಅರಮನೆಯ ಸವಾರಿ ತೊಟ್ಟಿಯಲ್ಲಿ ಯದುವೀರ್ ಅವರು ತಾವು ಬಳಸುವ ಕಾರುಗಳು ಸೇರಿ ಆನೆ, ಕುದುರೆ, ಒಂಟೆ, ಹಸುವಿಗೂ ಪೂಜೆ ಸಲ್ಲಿಸಿದರು. ಮಂಗಳವಾದ್ಯ ಹಾಗೂ ಪೊಲೀಸ್ ಬ್ಯಾಂಡ್ ಸಂಗೀತದ ಹಿಮ್ಮೇಳದಲ್ಲಿ ಆಯುಧ ಪೂಜೆ ಪೂರ್ಣಗೊಳಿಸಿದರು.
ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯ ದೇಶ ವಿಶ್ವದಲ್ಲಿ ಎದುರಾಗಿರುವ ಕೊರೊನಾ ಸಂಕಷ್ಟದಿಂದ ಜನತೆ ಶೀಘ್ರ ಮುಕ್ತರಾಗಿ ಸುಖ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.