ಬೆಂಗಳೂರು: ಪಟಾಕಿಗಳ ಮಾರಾಟವನ್ನು 17 ದಿನಗಳಿಂದ 10 ದಿನಗಳಿಗೆ ಇಳಿಸಿರುವ ರಾಜ್ಯ ಸರ್ಕಾರ, ಅಂಗಡಿಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ.
ಈ ಬಾರಿ ದೀಪಾವಳಿಗೆ ಹಸಿರು ಪಟಾಕಿಗಳನ್ನು ಹೊತ್ತಿಸಲು ಅವಕಾಶ ನೀಡಿದ ನಂತರ ಪಟಾಕಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕೋವಿಡ್-19 ಶಿಷ್ಟಾಚಾರದ ಮಧ್ಯೆ, ನವೆಂಬರ್ 7ರಿಂದ 16ರವರೆಗೆ ಮಾತ್ರ ಪಟಾಕಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.
ಈ ಹೊಸ ಮಾರ್ಗಸೂಚಿಯನ್ನು ನಿನ್ನೆ ಬಿಡುಗಡೆಗೊಳಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಜಿಲ್ಲಾಧಿಕಾರಿಗಳು, ಎಸ್ಪಿಗಳು, ಬೆಂಗಳೂರು ಸಿಟಿ ಪೊಲೀಸ್ ಆಯುಕ್ತರು, ಬಿಬಿಎಂಪಿಗಳಿಗೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಪಟಾಕಿ ಮಾರಾಟಗಾರರು ಮಾರಾಟ ಮಾಡುವ ಸ್ಥಳದಲ್ಲಿ ಸಾಕಷ್ಟು ಗಾಳಿ ಬೆಳಕು ಹೊಂದಿರಬೇಕು, ಅಂಗಡಿಯನ್ನು ಪ್ರತಿದಿನ ಸ್ಯಾನಿಟೈಸ್ ಮಾಡುತ್ತಿರಬೇಕು, ಥರ್ಮಲ್ ಸ್ಕ್ರೀನಿಂಗ್ ಮತ್ತು ಗ್ರಾಹಕರಿಗೆ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳುವ ವ್ಯವಸ್ಥೆ ಇಟ್ಟಿರಬೇಕು. ಮಾರಾಟಗಾರರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪಟಾಕಿ ಮಾರುವ ಅಂಗಡಿಗಳ ಮಧ್ಯೆ ಕನಿಷ್ಠ 6 ಮೀಟರ್ ಅಂತರವಿರಬೇಕು ಎಂದು ಸೂಚಿಸಲಾಗಿದೆ.