- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆರೋಗ್ಯದ ದೃಷ್ಟಿಯಿಂದ ಇವತ್ತು ಒಂದು ದಿನ ನಿಷೇಧಾಜ್ಞೆಯನ್ನು ಪಾಲನೆ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟನ್ ವೈರಸ್ ರೂಪಾಂತರ ಆತಂಕದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಜನರ ಆರೋಗ್ಯದ ದೃಷ್ಟಿಯಿಂದ ಇವತ್ತು ಒಂದು ದಿನ ಪಾಲನೆ ಮಾಡಿ ಎಂದು ಜನರಲ್ಲಿ ವಿನಂತಿ ಮಾಡಿದರು.
ಇನ್ನು ಹೊಸ ವರ್ಷದ ಶುಭಾಶಯಗಳನ್ನು ನಾಡಿನ ಜನತೆಗೆ ಕೋರಿದ ಅವರು, ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ತರಲಿ ಎಂದು ಹಾರೈಸಿದರು.
ಇದೇ ವೇಳೆ ಪಂಚಾಯಿತಿ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು ಬಿಜೆಪಿ ದಿನೇದಿನೇ ತನ್ನ ಸಾಧನೆ ಉತ್ತಮಗೊಳಿಸುತ್ತಿದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇಕಡಾ 50ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದಾರೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಶ್ರಮ ಇದೆ. 3800ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆದ್ದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್ ಹಾಗೂ ಸುರೇಶ್ ಕುಮಾರ್ ಇದ್ದರು.