ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೋವಿಡ್ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿದ್ದು ಪರೀಕ್ಷೆ ನಡೆಸುವುದಾದರೆ ವಿದ್ಯಾರ್ಥಿಗಳ ಜೀವದ ದೃಷ್ಟಿಯಿಂದ ಮೊದಲು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಇನ್ನಿತರ ಪರೀಕ್ಷಾ ಸಿಬ್ಬಂದಿಗೆ ಲಸಿಕೆ ನೀಡಿ ನಂತರ ಪರೀಕ್ಷೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದ್ದಾರೆ.
ಸೋಮವಾರ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ಅವರ ಜೊತೆ ನಡೆಸಿದ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆದರೆ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲಿ ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಆರ್ಥಿಕ ಮುಗ್ಗಟ್ಟು, ಆನ್ಲೈನ್ ತರಗತಿಗಳು, ಶಿಕ್ಷಣ ಶುಲ್ಕ, ಲಾಕ್ ಡೌನ್ ಮೊದಲಾದ ಕಾರಣಗಳಿಂದ ಸಮರ್ಪಕ ರೀತಿಯಲ್ಲಿ ವ್ಯಾಸಂಗ ಮಾಡದೆ ಇರುವ ವಿದ್ಯಾರ್ಥಿಗಳು ಪರೀಕ್ಷೆಗೆ ಗೊಂದಲಗಳ ನಡುವೆಯೇ ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಕಡೆ ಉನ್ನತ ವ್ಯಾಸಂಗದ ಕನಸು ಹೊತ್ತಿರುವ ವಿದ್ಯಾರ್ಥಿಗಳು ನೀಟ್, ಜೆಇಇ, ಸಿಇಟಿ, ಐಸಿಎಆರ್ ಮೊದಲಾದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕಿದೆ.
ರಾಜ್ಯ ಸರಕಾರ ತಕ್ಷಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಸಹಾಯವಾಣಿ ಆರಂಭಿಸಬೇಕು. ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡಿರುವ ಕಾರಣ ಶಿಕ್ಷಣದ ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದರಿಂದ ಸರಳವಾದ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಳ್ಳಬೇಕು.
ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಿಂತ ಮೊದಲು ಕಡ್ಡಾಯವಾಗಿ ಲಸಿಕೆ ನೀಡಲೇ ಬೇಕು. ಹೆಚ್ಚಿನ ಸಂಖ್ಯೆಯ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು. ಎಲ್ಲಾ ಆರೋಗ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಪ್ರಕ್ರಿಯೆಗಳಲ್ಲಿ ಎಚ್ಚರ ತಪ್ಪಿ ವಿದ್ಯಾರ್ಥಿಗಳ ಜೀವದ ಜೊತೆಗೆ ಆಟವಾಡದಿರಿ ಎಂದು ಶರತ್ ಖಾದ್ರಿ ಎಚ್ಚರಿಕೆ ನೀಡಿದರು.