ವಿಜಯಪಥ ಸಮಗ್ರ ಸುದ್ದಿ
ಮೈಸೂರು, ಶಿವಮೊಗ್ಗ: ಪ್ರತ್ಯೇಕ ಘಟನೆಗಳೆರಡರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತು ಪಾಸಿಟಿವ್ ಇರಬಹುದು ಎಂದು ಹೆದರಿದ ಸಾರಿಗೆ ನೌಕರ ಸೇರಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊರೊನಾ ಸೋಂಕಿಗೆ ಹೆದರಿದ ವ್ಯಕ್ತಿಯೊಬ್ಬ ಕಾಲುವೆಗೆ ಹಾರಿ ಜೀವ ಕಳೆದುಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಬಳಿ ಶನಿವಾರ ನಡೆದಿದ್ದರೆ, ಮೈಸೂರಿನಲ್ಲಿ ಕೆಎಸ್‌ಆರ್‌ಟಿ ನೌಕರನೊಬ್ಬ ಕೊರೊನಾ ಪಾಸಿಟಿವ್ ಇರಬಹುದು ಎಂದು ಅನುಮಾನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಿಂಗೇಗೌಡ (68) ಕಾರ್ಗಲ್ ಬಳಿ ಆತ್ಮಹತ್ಯೆ ಮಾಡಿಕೊಂಡವರು. ಕೆಪಿಸಿ ಮಾಜಿ ಉದ್ಯೋಗಿಯಾಗಿದ್ದ ಲಿಂಗೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಕಾರಣ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದರು. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಶನಿವಾರ ಆಸ್ಪತ್ರೆಗೆ ದಾಖಲಾಗಲು ವೈದ್ಯರು ಸೂಚಿಸಿದ್ದರು. ಆಸ್ಪತ್ರೆಗೆ ದಾಖಲಾಗಲು ಹೆದರಿದ ಅವರು ಕಾರ್ಗಲ್ ನ ಚೈನಾ ಗೇಟ್ ಬಳಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿಯ ನೌಕರ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಾಸನೂರ್ ಗ್ರಾಮದ ರಾಮಣ್ಣಗೌಡ (31) ತಾನಿದ್ದ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಡಿಗೆ ಮನೆಯಲ್ಲಿ ಒಬ್ಬರೆ ವಾಸವಾಗಿದ್ದರು. ಆನಾರೋಗ್ಯ ಕಾರಣ ನನಗೆ ಸೋಂಕು ಇರಬಹುದು ಎಂದು ಭಯ ಮತ್ತು ಅನುಮಾನಗೊಂಡು ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.