ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ಹುಂಡಿ ಕಾಣಿಕೆ ವೈದ್ಯರೆಂದು ಪ್ರಖ್ಯಾತಿ ಹೊಂದಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ವೈದ್ಯ ಡಾ.ಅಶೋಕ ರಾಮಣ್ಣ ಸೋನ್ನದ (83) ವಯೋಸಹಜವಾಗಿ ನಿಧನವಾಗಿದ್ದಾರೆ.
ಮುಧೋಳ ತಾಲೂಕು ಭಂಟನೂರಿನ ಡಾ.ಅಶೋಕ ರಾಮಣ್ಣ ಸೊನ್ನದ, ಅಮೆರಿಕದ ಮಿಚಿಗನ್ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 38 ವರ್ಷಗಳು ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ 2010ರಲ್ಲಿ ಭಾರತಕ್ಕೆ ಮರಳಿದ್ದರು ಆಗಿನಿಂದ ಹಳೆ ಬಾಗಲಕೋಟೆಯಲ್ಲಿ ತಾಯಿ ಪಾರ್ವತಿಬಾಯಿ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು.
ಭಂಟನೂರಿನ ರಾಮಣ್ಣ ಸೊನ್ನದ ಹಾಗೂ ಪಾರ್ವತಿ ಬಾಯಿ ದಂಪತಿಯ ಪುತ್ರ ಡಾ.ಅಶೋಕ ಬಾಗಲಕೋಟೆಯ ಸಕ್ರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 1965ರಲ್ಲಿ ಎಂಬಿಬಿಎಸ್ ಮುಗಿಸಿದ್ದರು. ನಂತರ ಅಹಮದಾಬಾದ್‌ನಲ್ಲಿ ಎಂ.ಡಿ. ಮುಗಿಸಿದ ಡಾ. ಅಶೋಕ್, 1972ರಲ್ಲಿ ಅಮೆರಿಕಗೆ ತೆರಳಿ ಅಲ್ಲಿಯೇ ನೆಲೆ ನಿಂತಿದ್ದರು. ಅಮೆರಿಕ ಪ್ರಜೆ ಐಲಿನ್ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
ಅಶೋಕ ಸೊನ್ನದ ಅವರ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಅವರ ಸೇವೆ ತೃಪ್ತಿಯಾದರೆ ಮಾತ್ರ ಕ್ಲಿನಿಕ್‌ನ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ದುಡ್ಡು ಹಾಕಿ ಎಂದು ಸೂಚಿಸುತ್ತಿದ್ದ ಕಾರಣ ಅವರು ಹುಂಡಿ ಕಾಣಿಕೆ ವೈದ್ಯ ಎಂದು ಜನಪ್ರಿಯವಾಗಿದ್ದರು.
ಅವರ ಜನಸೇವೆಗೆ ಮೆಚ್ಚಿ 2020ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಇವರ ಮನೆಯಲ್ಲಿ ಏಳು ಜನ ಪಿಎಚ್‌ಡಿ ಪದವೀಧರರಿದ್ದು ಡಾಕ್ಟರೇಟ್ ಕುಟುಂಬ ಎಂಬ ಗಿನ್ನಿಸ್ ದಾಖಲೆಯೂ ಇವರ ಕುಟುಂಬಕ್ಕಿದೆ.