ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಲಾಕ್ಡೌನ್ ನಿಂದಾಗಿ ಬೆಂಗಳೂರು ಮಹಾನಗರ ಸೇರಿದಂತೆ ಹಲವು ನಗರಗಳಲ್ಲಿ ಕೊರೊಆ ಎರಡನೆಯ ಪ್ರಭಾವ ತಗ್ಗಲು ಆರಂಭಿಸಿದ್ದು ಹಳ್ಳಿಗಳತ್ತ ಸರ್ಕಾರ ಹೆಚ್ಚಿನ ಲಕ್ಷ್ಯ ವಹಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಂಕು ಪ್ರಕರಣಗಳು ಹೆಚ್ಚು ಕಂಡುಬಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ಷ್ಮ ನಿಯಂತ್ರಿತ ವಲಯ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ, ಆರೋಗ್ಯಾಧಿಕಾರಿ ಒಳಗೊಂಡ ಸಮಿತಿಯು ಈ ವಲಯದ ಮೇಲ್ವಿಚಾರಣೆ ನಡೆಸಲಿದ್ದು, ಸೂಕ್ಷ್ಮ ನಿಯಂತ್ರಿತ ವಲಯದ ಕುಟುಂಬಗಳಿಗೆ ಮೆಡಿಸಿನ್ ದಿನಸಿ ಪದಾರ್ಥಗಳ ವ್ಯವಸ್ಥೆ ಮಾಡಬೇಕು, ಪ್ರಥಮ ಮತ್ತು ದ್ವಿತೀಯ ಸಂಪರ್ಕಕಿತರಿಗೆ ಜೀವಸತ್ವ ಔಷಧಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ನಾಳೆ ಸಿಎಂ ವಿಡಿಯೋ ಸಂವಾದ
ಸೂಕ್ಷ್ಮ ಪ್ರಕರಣಗಳು ಹೆಚ್ಚು ಕಂಡುಬಂದಿರುವ ಆಯ್ದ ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳ ಜೊತೆಗೆ ಸಿಎಂ ಬಿಎಸ್ವೈ ಬುಧವಾರ ವಿಡಿಯೋ ಸಂವಾದ ನಡೆಸಲಿದ್ದು, ಸರ್ಕಾರದ ಸೂಚನೆಯಂತೆ ಕೈಗೊಂಡ ಕ್ರಮಗಳನ್ನು ಪರಮಾರ್ಷಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದರು.
ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಸಂಜೆ ನಡೆಯಲಿರುವ ಸಚಿವರು ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಕೊರೊನಾ ಸ್ಥಿತಿಗತಿ, ಬ್ಲ್ಯಾಕ್ ಫಂಗಸ್ ಪರಿಸ್ಥಿತಿ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಸೇರಿ ಮುಂತಾದ ವಿಷಯಗಳು ಚರ್ಚೆಯಾಗಲಿದೆ ಎಂದು ಬೊಮ್ಮಾಯಿ ವಿವರಿಸಿದರು.
ರಮೇಶ್ ಜಾರಕಿಹೊಳಿ ಪ್ರಕರಣ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ಯಾವುದೇ ಹೇಳಿಕೆ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಲು ಬೊಮ್ಮಾಯಿ ನಿರಾಕರಿಸಿದರು.