ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ರಾಸಲೀಲೆ ಸಿಡಿ ವಿಚಾರವೀಗ ರಾಜಕೀಯ ಮುಖಂಡರ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಬೇರೆಯವರು ಏನು ಏಕಪತ್ನೀವ್ರತಸ್ಥರಾ ಎಂದು ಪ್ರಶ್ನಿಸಿರುವ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಿಡಿ ವಿಚಾರ ಕುರಿತು ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಸಚಿವ ಸುಧಾಕರ್ ಯಾರಾರು ಮುಖ್ಯಮಂತ್ರಿಯಾಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಸವಾಲು ಹಾಕುತ್ತೇನೆ. 224 ಶಾಸಕರ ನೈಜ ಜೀವನದ ಬಗ್ಗೆ ತನಿಖೆ ನಡೆಸಿ ಅವರ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೋ ಇಲ್ಲವೋ ಎಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಹೇಳಿದ್ದರು.
ಸುಧಾಕರ್ ನೀಡಿರುವ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ನನಗಿರೋದು ಒಬ್ಬಳೇ ಹೆಂಡತಿ ಒಂದೇ ಸಂಸಾರ ಎಲ್ಲರ ಬಗ್ಗೆ ತನಿಖೆ ನಡೆಸಿದರೆ ಮುಕ್ತವಾಗಿ ನಡೆಸಲಿ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಸುಧಾಕರ್ ಅವರು ನುಡಿಮುತ್ತುಗಳನ್ನಾಡಿದ್ದಾರೆ. ಇದನ್ನು ಇಲ್ಲಿ ಚರ್ಚೆ ಮಾಡೋದಲ್ಲ ಸದನದಲ್ಲಿ ಚರ್ಚೆ ಮಾಡುತ್ತೇವೆ. ಇನ್ನು ಒಬ್ಬರಿಗೆ ಸಂಬಂಧಿಸಿದ್ದಲ್ಲ. ಹೀಗಾಗಿ ನಮ್ಮ ನಾಯಕರ ಜತೆಯೂ ಚರ್ಚಿಸಿ ಮುಂದಿನ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಹೇಳಿಕೆಯನ್ನು ನೈತಿಕ ದಿವಾಳಿತನ ಪ್ರದರ್ಶನ ಎಂದು ಕರ್ನಾಟಕ ಕಾಂಗ್ರೆಸ್ ಕುಹಕವಾಡಿದೆ. ಈ ಮಧ್ಯೆ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲೇ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ಮುಂದುವರಿಸಿದ್ದರು.