ಬೆಂಗಳೂರು: ಏಪ್ರಿಲ್ ತಿಂಗಳ ವೇತನ ಇನ್ನು ಬರಲಿಲ್ಲ ಎಂದು ಕಣ್ಣು ಬಾಯಿ ಬಿಡುತ್ತಿರುವ ಸಾರಿಗೆ ಸಿಬ್ಬಂದಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು ಎರಡು ತಿಂಗಳ ವೇತನ ಬಿಡುಗಡೆ ಮಾಡಿದೆ.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆ ಮೇರೆಗೆ ಸರ್ಕಾರ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ 2 ತಿಂಗಳ ವೇತನಕ್ಕಾಗಿ 325 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದರಲ್ಲಿ ಏಪ್ರಿಲ್ ತಿಂಗಳ ವೇತನಕ್ಕಾಗಿ ಶೇ.50ರಷ್ಟು ಮೂಲ ವೇತನ ಮತ್ತು 15 ದಿನಗಳ ತುಟ್ಟಿಭತ್ಯೆಯನ್ನು ಹಾಗೂ ಮೇ ತಿಂಗಳ ಶೇ. 75ರಷ್ಟು ಮೂಲ ವೇತನ ಮತ್ತು ತುಟ್ಟಿಭತ್ಯಯನ್ನು ಸರ್ಕಾರ ಬಿಡುಗಡೆ ಮಾಡಿ ಅದೇಶಿಸಿದೆ.
ಏಪ್ರಿಲ್ ಮತ್ತು ಮೇ ಈ 2 ತಿಂಗಳ ಸಂಬಳದ ಒಟ್ಟು ಮೊತ್ತ ಸುಮಾರು 650 ಕೋಟಿ ರೂ.ಗಳು. ಆದರೆ ಸರ್ಕಾರ ಬಿಡುಗಡೆ ಮಾಡಿರುವುದು 325 ಕೋಟಿ ರೂ.ಗಳು. ಹೀಗಾಗಿ ಸಾರಿಗೆ ನೌಕರರಿಗೆ ಏಪ್ರಿಲ್ ತಿಂಗಳಲ್ಲಿ ಮೂಲ ವೇತನದ ಅರ್ಧ ಮತ್ತು 15 ದಿನಗಳ ತುಟ್ಟುಭತ್ಯೆ ಯನ್ನು ಮಾತ್ರ ಬಿಡುಗಡೆ ಮಾಡಿದೆ.
ಇನ್ನು ಮೇ ತಿಂಗಳ ಶೇ.75ರಷ್ಟು ಮೂಲ ವೇತನದ ಜತೆಗೆ ತುಟ್ಟಿಭತ್ಯೆಯನ್ನು ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಯ ಒಟ್ಟು ಎರಡು ತಿಂಗಳಿನ ಅಂದರೆ, ಏಪ್ರಿಲ್‌ನಲ್ಲಿ ಶೇ. 50ರಷ್ಟು ಮತ್ತು ಮೇ ತಿಂಗಳಿನಲ್ಲಿ ಶೇ. 75 ರಷ್ಟು ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿ 325 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದಂತ್ತಾಗಿದೆ.
ಉಳಿದ ಏಪ್ರಿಲ್ ತಿಂಗಳ ಶೇ. 50 ಮತ್ತು ಮೇ ತಿಂಗಳ 25 ರಷ್ಟು ವೇತನವನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಬೇಕಿದೆ. ಇನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ಸಿಬ್ಬಂದಿಗೆ ವೇತನ ಪಾವತಿಗೆ ಇದರಿಂದ ಸಾಧ್ಯವಾದಂತಾಗಿದೆ.