ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರೋಗ್ಯ ಸಚಿವ ಸುಧಾಕರ್ 224 ಶಾಸಕರ ಜೀವನದ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್ ಯಾರ್ಯಾರು ಮುಖ್ಯಮಂತ್ರಿಯಾಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರ ಎಂದು ಹೇಳಿಕೊಳ್ಳುತ್ತಿದ್ದಾರೆ ಅವರಿಗೆ ಸವಾಲು ಹಾಕುತ್ತೇನೆ. 224 ಶಾಸಕರಲ್ಲಿ ಯಾರಾರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿಲ್ಲ, ಜತೆಗೆ ಯಾರಾರು ಶ್ರೀರಾಮಚಂದ್ರ ಎಂಬುದು ಗೊತ್ತಾಗಲಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ರಮೇಶ್ ಕುಮಾರ್, ಬಿ. ಮುನಿಯಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮತ್ತು ನಮ್ಮ ಕುಮಾರಣ್ಣನವರು ಎಲ್ಲರೂ ಸತ್ಯ ಹರಿಶ್ಚಂದ್ರರೇ ಅಲ್ಲವೇ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದನ್ನು ಇವರೆಲ್ಲರೂ ಒಪ್ಪಿಕೊಳ್ಳಲಿ. 224 ಶಾಸಕರ ಬಗ್ಗೆ ತನಿಖೆ ನಡೆಸಲು ಅವಕಾಶ ಮಾಡಲಿ ಇವರೇನೆಂಬುವುದು ರಾಜ್ಯದ ಜನರಿಗೆ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
ಸುಧಾಕರ್ ಅವರ ಧಾಟಿಯಲ್ಲೇ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಯಾರು ಶ್ರೀರಾಮಚಂದ್ರ, ಸೀತಾಮಾತೆಯರು? ಒಂದು ಬೆರಳು ಬೇರೆಯವರನ್ನು ತೋರಿಸಿದರೆ ನಾಲ್ಕು ಬೆರಳು ಅವರ ಕಡೆಯ ತೋರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಅವರವರ ಆತ್ಮ ಮುಟ್ಟಿ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ಈ ಮಧ್ಯೆ ಸಿಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಉಸ್ತುವಾರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಮೂರನೇ ದಿನವೂ ಧರಣಿ ಮುಂದುವರಿಸಿದ್ದರು.