ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜೂನ್ 14ರವರೆಗೆ ಲಾಕ್‌ಡೌನ್ ಮುಂದುವರಿಯಲಿದ್ದು, ಬಳಿಕ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‌ಡೌನ್ ತೆರವು ಗೊಳಿಸಲಾಗುವುದು ಎಂಬ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಕಡೆ ಲಾಕ್‌ಡೌನ್ ಸಡಿಲಿಕೆ ಮಾಡಿ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಪ್ರತಿ ಜಿಲ್ಲೆಗಳ ಕೊರೊನಾ ಸ್ಥಿತಿಗತಿ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಈಗಿನ ಲಾಕ್‌ಡೌನ್ ಜೂನ್ 14ರ ಬೆಳಗ್ಗೆ 6 ಗಂಟೆಗೆ ಕೊನೆಯಾಗಲಿದ್ದು ಅದಕ್ಕೂ ನಾಲ್ಕೈದು ದಿನ ಮೊದಲು ಲಾಕ್‌ಡೌನ್ ಮಾಡಬೇಕೆ, ಯಾವ ರೀತಿಯಲ್ಲಿ ಮಾಡಬೇಕು, ಎಲ್ಲಿ ಯಾವ ರೀತಿ ಸಡಿಲಿಕೆ ಮಾಡಬೇಕೆಂದು ನಿರ್ಧರಿಸಲಾಗುವುದು. ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಕಡಿಮೆ ಶೇಕಡಾ 5ಕ್ಕೆ ಬರಬೇಕು ಎಂದು ಹೇಳಿದರು.
ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆಯಾದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್‌ಲಾಕ್ ಮಾಡುವ ಪ್ರಕ್ರಿಯೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೈಸೂರಿನ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಿನ್ನೆ ಮೈಸೂರಿಗೆ ಹೋಗಿದ್ದ ಮುಖ್ಯ ಕಾರ್ಯದರ್ಶಿಗಳು ನನಗೆ ವರದಿ ನೀಡಿದ್ದಾರೆ, ಇಂದು ಸಂಜೆಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.