ಬೆಂಗಳೂರು: ಗೌರಿ ಗಣೇಶ ಹಬ್ಬದ ಬಳಿಕ ವಾರಕ್ಕೊಮ್ಮೆ ಪ್ರತಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಯಾವುದೇ ಅಧಿಕಾರ, ಸ್ಥಾನಮಾನ ಇಲ್ಲದೆಯೂ ಕೆಲಸ ಮಾಡಬಹುದು ಅಂತಾ ತೋರಿಸಬೇಕು ಎಂದು ಅಂದುಕೊಂಡಿದ್ದು, ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಬಲಗೊಳಿಸುತ್ತೇನೆ. ನಾಳೆ ಗುಂಡ್ಲುಪೇಟೆಗೆ ಹೋಗಿ ರವಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದರು.
ಸಂಪುಟ ರಚನೆ ವಿಚಾರ ತೀರ್ಮಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು. ನಾನು ಆ ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಜಗದೀಶ್ ಶೆಟ್ಟರ್ ನನ್ನ ಬಳಿ ಬಂದು, ಯುವಕರಿಗೆ ಅವಕಾಶ ಮಾಡಿಕೊಡಬೇಕು ಅದಕ್ಕೆ ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಸರ್ಕಾರ ಬರಲು ಕಾರಣರಾದ ವಲಸಿಗ ಸಚಿವರನ್ನು ಮುಂದುವರಿಸುವ ಬಗ್ಗೆ ಸಿಎಂ ಜತೆ ಮಾತಾಡುತ್ತೇನೆ. ಏನೇ ಇದ್ದರೂ ಸಿಎಂ ಬಳಿ ಹೋಗಿ ಮಾತನಾಡಿ ಅಂತಾ ನಾನು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.