ಸರ್ಕಾರದ ನಿರ್ಲಕ್ಷ್ಯದಿಂದಾಗಿ ನ್ಯಾಯಾಲಯದಲ್ಲಿ ಪೋಷಕರಿಗೆ ಹಿನ್ನಡೆ: ಎಎಪಿ
ಬೆಂಗಳೂರು: ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಕಷ್ಟವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ನಿರ್ಲಕ್ಷ್ಯ ತೋರಿದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಚಿಂತನ-ಮಂಥನ ನಡೆಸುವುದಾಗಿ ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಬೆಂಗಳೂರಿನ ಕ್ಯಾಸ್ಟಲ್ ಸ್ಟ್ರೀಟ್‌ನಲ್ಲಿರುವ ಪಕ್ಷದದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿ, “ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಅನೇಕ ತಿಂಗಳು ದುಡಿಮೆಯಿಲ್ಲದೇ ಬದುಕು ಸಾಗಿಸಿ, ದುಬಾರಿ ಶಾಲಾ ಶುಲ್ಕ ಕಟ್ಟಬೇಕಾಗಿರುವ ಪೋಷಕರ ಕಷ್ಟ ಹೇಳತೀರದಾಗಿದೆ ಎಂದರು.
ಈ ಸಂಬಂಧ ಆಮ್ ಆದ್ಮಿ ಪಾರ್ಟಿಯು ರಾಜ್ಯಾದ್ಯಂತ 45 ದಿನಗಳ ಕಾಲ ಸಹಿಸಂಗ್ರಹ ಅಭಿಯಾನ ನಡೆಸಿ, 1 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಶುಲ್ಕವನ್ನು ಶೇ. 30ರಷ್ಟು ಇಳಿಸಬೇಕು ಹಾಗೂ ಅಲ್ಲಿನ ಶಿಕ್ಷಕರಿಗೆ ಲಾಕ್‌ಡೌನ್ ಅವಧಿಯ ಸಂಬಳವನ್ನು ಸರ್ಕಾರ ನೀಡಬೇಕು ಎಂಬುದು ನಮ್ಮ ಆಗ್ರಹ. ಆದರೆ ಈಗ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತೋರಿದ ಉದಾಸೀನದಿಂದಾಗಿ, ಶೇ. 15ರಷ್ಟು ಮಾತ್ರ ವಿನಾಯಿತಿ ಸಿಕ್ಕಿರುವುದು ಬೇಸರ ಉಂಟುಮಾಡಿದೆ” ಎಂದರು.
ರಾಜ್ಯ ಸರ್ಕಾರಕ್ಕೆ ಬಡ-ಮಧ್ಯಮ ವರ್ಗದ ಪೋಷಕರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪೋಷಕರು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಹಿತ ಕಾಪಾಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ.
ಇದನ್ನು ಖಂಡಿಸಿ ಸೆ. 22 ಬುಧವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸೆ. 25 ಶನಿವಾರದಂದು ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನೊಂದ ಪೋಷಕರು ಹಾಗೂ ಶಿಕ್ಷಣ ತಜ್ಞರ ಜೊತೆ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಚರ್ಚಿಸಿ, ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ಮೋಹನ್ ದಾಸರಿ ತಿಳಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡರಾದ ಪ್ರಕಾಶ್ ನೆಡಂಗುಡಿಯವರು ಮಾತನಾಡಿ, “ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ, ಕಳೆದ ವರ್ಷ ಶೇ. 30ರಷ್ಟು ವಿನಾಯಿತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಅದರಲ್ಲಿ ಅರ್ಧ ಭಾಗವನ್ನು ಈಗ ಕಟ್ಟಬೇಕಾದ ಆತಂಕ ಎದುರಾಗಿದೆ.
ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಶಿಕ್ಷಣ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚಿಸಬೇಕು. ಖಾಸಗಿ ಶಾಲೆಗಳಿಗೆ ಅನ್ಯಾಯವಾಗದಂತೆ ಹಾಗೂ ಪೋಷಕರಿಗೆ ಹೊರೆಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.