ಬೆಂಗಳೂರು: ಮುಷ್ಕರ ಸಂದರ್ಭದಲ್ಲಿ ಅಮಾನತು ಮಾಡಿದ್ದ ಬಿಎಂಟಿಸಿ ನೌಕರರನ್ನು ಇಲಾಖೆಯ ವಿಚಾರಣೆ ನಡೆಸಿ ಮತ್ತೆ ಡಿಸ್ಮಿಸ್ ಮಾಡುವ ಮೂಲಕ ಅಧಿಕಾರಿಗಳು ನೌಕರರ ಮೇಲೆ ಮತ್ತೆ ಸಮರ ಸಾರುತ್ತಿದ್ದಾರೆ.
ಒಂದು ಕಡೆ ಸಾರಿಗೆ ಸಚಿವ ಶ್ರೀರಾಮುಲು ಅವರು ಮುಷ್ಕರದ ವೇಳೆ ನೌಕರರ ವಿರುದ್ಧ ಮಾಡಿರುವ ವಜಾ ಮತ್ತು, ವರ್ಗಾವಣೆ, ಅಮಾನತು, ಪೊಲೀಸ್ ಪ್ರಕರಣಗಳು ಸೇರಿ ಎಲ್ಲವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ.
ಆದರೆ ಅಧಿಕಾರಿಗಳು ಅಂಧ ದರ್ಬಾರ್ ನಡೆಸುತ್ತ ನೌಕರರ ಮೇಲೆ ತಮ್ಮ ದರ್ಪವನ್ನು ಮುಂದುವರಿಸುತ್ತಿದ್ದಾರೆ. ನೌಕರರ ದುಡಿಮೆಯಿಂದಲೇ ಸಂಸ್ಥೆ ನಡೆಯುತ್ತಿರುವುದು, ಎಂಬುದನ್ನೇ ಮರೆತಂತಿರುವ ಈ ಅಧಿಕಾರಿಗಳು ನಾವು ಮಾಡಿದ್ದೇ ಸರಿ ಎಂಬಂತೆ ಕಾನೂನನ್ನು ಗಾಳಿಗೆ ತೂರಿ ಈ ರೀತಿ ಅಮಾಯಕ ನೌಕರರ ವಿರುದ್ಧ ನಿಂತಿರುವುದು ಎಷ್ಟು ಸರಿ. ಇದು ಪ್ರಜಾಪ್ರಭುತ್ವವೋ ಏನು?
ಒಂದು ಕಡೆ ಖಾಸಗಿ ಕಂಪನಿಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದರೆ, ಆ ಕಾರ್ಮಿಕರ ಪರ ನಿಲ್ಲುವ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಇವರ ಪಾಲಿಗೆ ಏಕೆ ಮೌನ ವಹಿಸಿದೆ. ಈ ಸಾರಿಗೆ ನಿಗಮಗಳ ಅಧಿಕಾರಿಗಳು ನೌಕರರ ವಿರುದ್ಧ ದರ್ಪ ಮೆರೆಯುತ್ತಿದ್ದರೂ ಅವರನ್ನು ಶಿಕ್ಷಿಸದೆ ಏಕೆ ಕೈ ಕಟ್ಟಿ ಕುಳಿತಿದೆ. ಇದನ್ನು ಗಮನಿಸುತ್ತಿದ್ದರೆ ನಾವು ಮತ್ತೆ ಬ್ರಿಟಿಷರ ಕಾಲದಲ್ಲಿ ಇದ್ದೇವೋ ಏನೋ ಎನಿಸುತ್ತಿದೆ.
ಅಧಿಕಾರಿಗಳು ತಮಗೆ ನೌಕರರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವಿದೆ ಎಂದು ಅದನ್ನೇ ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯೇ? ಇನ್ನು ಇತ್ತ ಸಚಿವರ ಮಾತಿಗೆ ಕಿಮ್ಮತ್ತನ್ನು ಕೊಡ್ತಾ ಇಲ್ಲದ ಈ ಅಧಿಕಾರಿಗಳು, ಅದರಲ್ಲೂ ಬಿಎಂಟಿಸಿ ಭದ್ರತಾ ಜಾಗ್ರತಾಧಿಕಾರಿ ಡಾ. ಅರುಣ್ ಮತ್ತು ಡಿಸಿಗಳು ನೌಕರರನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಈ ಪ್ರಜಾಪ್ರಭುತ್ವದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸಲೇ ಬೇಕು.
ಮುಷ್ಕರದ ಸಮಯದಲ್ಲಿ ಅಮಾಯಕರನ್ನು ಅಮಾನತು, ವಜಾ, ವರ್ಗಾವಣೆ ಮಾಡಿರುವುದಲ್ಲದೇ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ಅವರ ವಿರುದ್ಧ ಕೀಳಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಇದು ಕಾರ್ಮಿಕ ಹಕ್ಕಿಗೆ ವಿರುದ್ಧವಾಗಿದೆ ಎಂಬುವುದು ಗೊತ್ತಿದ್ದರೂ ಅದನ್ನು ಮರೆ ಮಾಚಿ ಅಮಾನತು ಮಾಡಿದ ನೌಕರರನ್ನು ಇಂದು ವಜಾ ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ. ಇದನ್ನು ಗಮನಿಸಿದರೆ ಈ ಅಧಿಕಾರಿಗಳು ನೌಕರರಿಂದ ಸಂಸ್ಥೆಗೆ ಯಾವುದೇ ಲಾಭವಿಲ್ಲ ಎಲ್ಲ ನಮ್ಮಿಂದಲೇ ನಡೆಯುತ್ತಿರುವುದು ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ ಎನಿಸುತ್ತಿದೆ.
ಇನ್ನು ಇದು ಸರ್ಕಾರದ ಬೇರೆ ಬೇರೆ ಇಲಾಖೆಗಳ ರೀತಿ ಉನ್ನತ ಅಧಿಕಾರಿಗಳ ಕೈಯಲ್ಲಿ ಇರುವಂತೆ ಈ ಸಂಸ್ಥೆಯು ಉನ್ನತ ಅಧಿಕಾರಿಗಳ ಕೈಯಲ್ಲಿ ಇದ್ದರೂ ಈ ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಈ ಇಲಾಖೆ ಮಕಾಡೆ ಮಲಗುತ್ತದೆ ಎಂಬ ಒಂದು ಸಾಮಾನ್ಯ ಜ್ಞಾನವೂ ಇಲ್ಲವೇ?
ಸಂಸ್ಥೆಗಳಿಗೆ ಆಧಾರ ಸ್ತಂಭವಾಗಿರುವ ಈ ನೌಕರರ ವಿರುದ್ಧ ಈ ರೀತಿ ನಡೆದುಕೊಂಡರೆ ಇವರು ಏನು ಸಾಧನೆ ಮಾಡಿದಂತಾಗುತ್ತದೆ?
ಇನ್ನಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರು ನೌಕರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ನೌಕರರಿಗೆ ಆಗುತ್ತಿರುವ ಅನ್ಯಾಯ ಕಿರುಕುಳವನ್ನು ತಪ್ಪಿಸಬೇಕಿದೆ.ಇಲ್ಲದಿದ್ದರೆ ಮಾತಿಗೆ ತಪ್ಪಿದ ಸಿಎಂ ಮತ್ತು ಸಾರಿಗೆ ಸಚಿವರು ಎಂಬ ಹಣೆಪಟ್ಟಿಕಟ್ಟಿಕೊಂಡು ಜೀವನ ಪೂರ್ತಿ ಬದುಕಬೇಕಾಗುತ್ತದೆ.
ಇನ್ನು ಸಚಿವರು ನೌಕರರಿಗೆ ಕೊಟ್ಟ ಮಾತಿನಂತೆ ಇದುವರೆಗೂ ನಡೆದುಕೊಂಡಿಲ್ಲ. ಅವರು ವೇದಿಕೆಗಳಲ್ಲಿ ಮತ್ತು ನೌಕರರ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸುವ ವೇಳೆ ಎಲ್ಲವನ್ನು ಸರಿ ಮಾಡುತ್ತೇವೆ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇತ್ತ ಅಧಿಕಾರಿಗಳು ತಮ್ಮ ಅನ್ಯಾಯವನ್ನು ನೌಕರರ ವಿರುದ್ಧ ಮಾಡಿಕೊಂಡೆ ಬರುತ್ತಿದ್ದಾರೆ. ಅಂದರೆ ಇಲ್ಲಿ ಸಚಿವರ ಮಾತಿಗೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಎಂಬುವುದು ಸಾಬೀತಾಗುತ್ತಿದೆ.
ಹೀಗಾಗಿ ಇನ್ನಾದರೂ ಅಧಿಕಾರಿಗಳ ಈ ನಡೆಗೆ ಕಡಿವಾಣ ಹಾಕುವ ಮೂಲಕ ನೊಂದ ನೌಕರರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ನಾವು ಸಚಿವರು ಎಂಬುದನ್ನು ತೋರಿಸಬೇಕಿದೆ. ಇಲ್ಲದಿದ್ದರೆ ಇಂಥ ಅಧಿಕಾರಿಗಳ ಕಿರುಕುಳದಿಂದ ನೌಕರರು ತಮ್ಮ ಜೀವವನ್ನೇ ತೊರೆಯುವ ನಿರ್ಧಾರ ಮಾಡಲಿದ್ದಾರೆ. ಹೀಗಾಗಿ ಸಚಿವರು ಅಧಿಕಾರಿಗಳ ನಡೆಗೆ ಬ್ರೇಕ್ ಹಾಕಬೇಕಿದೆ.