ಬೆಂಗಳೂರು: ಎರಡು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದು ಕಣ್ಣೀರಿಡುತ್ತಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದರು.
ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್ವೈ ಆರಂಭದಿಂದಲೇ ತುಂಬಾ ಭಾವುಕರಾಗಿ ಮಾತನಾಡಿದರು. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು 75 ವರ್ಷ ಮೇಲ್ಪಟ್ಟ ನಾಯಕರಿಗೆ ಸ್ಥಾನಮಾನ ಕೊಡುವುದಿಲ್ಲ ಎಂಬ ತೀರ್ಮಾನವನ್ನು ತೆಗೆದುಕೊಂಡರು.ಆದರೆ, ಯಾರಿಗೂ ಅವಕಾಶ ಕೊಡಲಿಲ್ಲ ಆದರೆ ನನ್ನ ಬಗ್ಗೆ ಅತ್ಯಂತ ವಾತ್ಸಲ್ಯ, ಪ್ರೀತಿ ಮತ್ತು ವಿಶ್ವಾಸದಿಂದ ಅವಕಾಶ ಮಾಡಿಕೊಟ್ಟರು ಎಂದು ಕಣ್ಣೀರಿಡುತ್ತಲೇ ನಿರ್ಗಮಿಸುವ ಮಾತುಗಳನ್ನಾಡಿದರು.
ನಮ್ಮನ್ನು ಮಾತನಾಡಿಸಲು 50 ಮಂದಿ ಸಿಗದೇ ಇದ್ದ ಕಾಲದಲ್ಲಿ ಎಲ್ಲಾ ಕಾರ್ಯಕರ್ತರ ಜೊತೆಗೂಡಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಅಂದಿನಿಂದ ನಾನೆಂದು ಹಿಂದೆ ತಿರುಗಿ ನೋಡಲೇ ಇಲ್ಲ. ನನ್ನ ಕರ್ತವ್ಯವನ್ನು ಜನ ಮೆಚ್ಚುವ ರೀತಿಯಲ್ಲಿ ನಿರ್ವಹಿಸಿದೆ ಎಂಬ ತೃಪ್ತಿ ಮತ್ತು ಸಮಾಧಾನ ನನಗಿದೆ ಎಂದರು.
ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಜೀವನವನ್ನು ಪ್ರಾರಂಭ ಮಾಡಿದೆ. ಆರ್ಎಸ್ಎಸ್ ಪ್ರಚಾರಕನಾಗಿ ಕೆಲಸ ಆರಂಭಮಾಡಿ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಪುರಸಭೆ ಅಧ್ಯಕ್ಷನಾದೆ.
ಈ ವೇಳೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ನಾನು ಸತ್ತೇ ಹೋದೆ ಅಂದುಕೊಂಡಿದ್ದರು. ಆದರೆ ಭಗವಂತನ ಕೃಪೆಯಿಂದ ಬದುಕಿದೆ. ಇನ್ನು ಮುಂದೆ ಬದುಕಿದರೆ ನಾಡಿನ ಜನತೆಗಾಗಿ ಎಂದು ಅಂದೇ ತೀರ್ಮಾನಿಸಿದೆ. ಅದರಂತೆ ನಡೆದುಕೊಂಡಿದ್ದೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.