ಬೆಂಗಳೂರು: ನಿನ್ನೆ ನಮ್ಮನಗಲಿದ ಹಿರಿಯ ನಟ, ಚಂದನವನದ ಶರಪಂಜರ ಶಿವರಾಮಣ್ಣ (84) ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ನಿಧನರಾಗಿದ್ದರು. ಹೀಗಾಗಿ ಇಂದು ಬೆಳಗ್ಗೆ 7.30ರಿಂದ 10ಗಂಟೆಗೆ ವರೆಗೆ ಅವರ ಪಾರ್ಥಿವ ಶರೀರವನ್ನು ಬನಶಂಕರಿ ನಿವಾಸದಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯುವ ಮೂಲಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನಂತರ ತ್ಯಾಗರಾಜನಾಗರದಲ್ಲಿರುವ ಅವರ ನಿವಾಸಕ್ಕೆ ವರ್ಗಾಯಿಸಿ, ಅಲ್ಲಿ ಪೂಜಾ ವಿಧಿವಿಧಾನವನ್ನು ನೆರವೇರಿಸಿ ಬಳಿಕ ಕುಟುಂಬಸ್ಥರು, ಸಮೀಪದ ಬಂಧುಗಳ ಸಮ್ಮುಖದಲ್ಲಿ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಗುರುಸ್ವಾಮಿಯಾಗಿದ್ದ ಶಿವರಾಂಗೆ ಪಂಚಾಮೃತ ಅಭಿಷೇಕ ಮತ್ತು ಕೇಸರಿ ವಸ್ತ್ರ ಸಮರ್ಪಿಸಿ ಚಿತಾಗಾರಾದಲ್ಲಿ ಬ್ರಾಹ್ಮಣ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಲಾಯಿತು. ಈ ವೇಳೆ ಅಯ್ಯಪ್ಪ ಭಕ್ತರು ಭಜನೆ ಮಾಡಿ ಅಯ್ಯಪ್ಪನಿಗೆ ಇಷ್ಟವಾದ ಕರ್ಪೂರವನ್ನು ಸಮರ್ಪಿಸಿದರು. ಶಿವರಾಂ ಪುತ್ರರಾದ ರವಿಶಂಕರ್ ಮತ್ತು ಲಕ್ಷ್ಮೀಶ್ ಅಗ್ನಿ ಸ್ಪರ್ಶ ಮಾಡಿದರು.
ಈ ವೇಳೆ ಪೊಲೀಸರು ಮೂರು ಸುತ್ತು ಕುಶಲತೋಪು ಹಾರಿಸುವ ಮೂಲಕ ಗೌರವದ ವಿದಾಯ ಹೇಳಿದರು.
ಶನಿವಾರ ಬನಶಂಕರಿಯ ನಿವಾಸದಲ್ಲಿ ಚಿತ್ರರಂಗದ ಹಿರಿ-ಕಿರಿಯ ಕಲಾವಿದರೆಲ್ಲರೂ ಕೂಡ ಶಿವರಾಮಣ್ಣಗೆ ಅಂತಿಮ ನಮನ ಸಲ್ಲಿಸಿದ್ರು. ದ್ವಾರಕೀಶ್, ಶ್ರೀನಾಥ್, ಅನಂತನಾಗ್, ಜಗ್ಗೇಶ್, ನಿರ್ದೇಶಕ ಭಗವಾನ್, ಶಿವಣ್ಣ, ರಾಘಣ್ಣ, ದೇವರಾಜ್, ರಮೇಶ್ ಅರವಿಂದ್, ಪ್ರೇಮಾ, ಉಮಾಶ್ರೀ, ಗಿರಿಜಾ ಲೋಕೇಶ್, ಸುಂದರರಾಜ್, ಯೋಗರಾಜ್ ಭಟ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಕಂಬನಿ ಮಿಡಿದ್ದರು.
ಕನ್ನಡಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡಿದ್ದ ಶಿವರಾಂ ಹಿರಿಯ ನಟರಾಗಿ ಮಾತ್ರವಲ್ಲ, ಸಿನಿಮಾ ಕುಟುಂಬಕ್ಕೆ ಹಿರಿಯರ ಸ್ಥಾನದಲ್ಲಿದ್ದು ನಿಜ ಪೋಷಕರೆನಿಸಿದ್ದರು. ಎಲ್ಲರ ಪಾಲಿಗೆ ಪ್ರೀತಿಯ ಶಿವರಾಮಣ್ಣ ಆಗಿದ್ದರು. ಇದೀಗ ಶಿವರಾಂ ಅಗಲಿಕೆಯಿಂದ ಕನ್ನಡ ಚಿತ್ರರಂಗ ಅಕ್ಷರಶಃ ಅನಾಥವಾಗಿದೆ.
ಕರ್ನಾಟಕ-ತಮಿಳುನಾಡು ಗಡಿಭಾಗದ, ಬೆಂಗಳೂರಿನಿಂದ 60 ಕಿಲೋಮೀಟರ್ ದೂರದ ಚೂಡಸಂದ್ರದಲ್ಲಿ 1938ರ ಜನವರಿ 28ರಂದು ಜನಿಸಿದ ಶಿವರಾಂ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಅವರು ಸೇರಿದ್ದು ಬೆಂಗಳೂರು ಎಂಬ ಮಾಯನಗರಿಯನ್ನು.
ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಾ ಬಂದ ಅವರು ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟರು. 1958ರಲ್ಲಿ ಮೊದಲ ಬಾರಿಗೆ ಬೆರೆತ ಜೀವ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಸುಮಾರು ಆರು ದಶಕಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಅವರು ನಿರ್ವಹಿಸದ ಪಾತ್ರವಿಲ್ಲ.
ಗುರು ಶಿಷ್ಯರು, ಶರಪಂಜರ, ನಾಗರಾಹಾವು, ದೇವರಗುಡಿ, ಎಡಕಲ್ಲು ಗುಡ್ಡದ ಮೇಲೆ, ಚಲಿಸುವ ಮೋಡಗಳು, ಹಾಲುಜೇನು, ಹೊಂಬಿಸಲು, ಶುಭಮಂಗಳ.. ಉಪಾಸನೆ, ಡ್ರೈವರ್ ಹನುಮಂತು, ಬನಶಂಕರಿ.. ತಾಯಿ ಸಾಹೇಬ, ಅವರ ಸಿನಿಮಾಗಳ ಬಗ್ಗೆ ಹೇಳಲು ಒಂದೇ ಎರಡೇ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗೃಹಭಂಗ, ಬದುಕು, ಚಕ್ರ, ಇತ್ತೀಚಿಗೆ ಬಂದ ಸತ್ಯ ಸೇರಿ ಧಾರವಾಹಿಗಳಿಗೂ ಜೀವ ತುಂಬಿದ್ದಾರೆ.
ಕ್ಯಾಮೆರಾ ಸಹಾಯಕರಾಗಿ, ಸಹಾಯ ನಿರ್ದೇಶಕರಾಗಿ , ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಂದನವನದ ನಿಜ ಅರ್ಥದಲ್ಲಿ ಪೋಷಕರೆನಿಸಿದ್ದರು. ಹಿರಿಯನಟ ಶಿವರಾಂ ಅಭಿನಯದ ಕೊನೇ ಚಿತ್ರ ಆವರ್ತ. ಈ ಸಿನಿಮಾದಲ್ಲಿ ನರೇಂದ್ರನಾಥ ಬಲ್ಲಾಳ ಅನ್ನೊ ಪಾತ್ರದಲ್ಲಿ ಶಿವರಾಂ ಕಾಣಿಸಿಕೊಂಡಿದ್ದರು.