ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ. ನಾನು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಆಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಬಿ.ಎಸ್. ಯಡಿಯೂರಪ್ಪ ಜತೆ ಕೆಲಸ ಮಾಡಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಧ್ಯಮವೊಂದಕ್ಕೆ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೆ ನಾನು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿದ್ದೇನೆ. ತಳಮಟ್ಟದಿಂದ ಮೇಲ್ಮಟ್ಟದವರೆಗೂ ಕೆಲಸ ಮಾಡಿದ್ದೇನೆ. ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ವರಿಷ್ಠರು ಜವಾಬ್ದಾರಿ ಕೊಟ್ಟರೆ ನಿರ್ವಹಿಸುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋಗೂ ನನ್ನ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದರು.
ಇನ್ನು ನೈತಿಕ ಕಾರಣದಿಂದ ನಾನು ಸಂಪುಟಕ್ಕೆ ಸೇರುವುದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ನನ್ನ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದೇನೆ ಎಂದೂ ಅವರು ಹೇಳಿದರು.
ಜಗದೀಶ್ ಶೆಟ್ಟರ್ 2004 ರಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸೋಲಿಸಿದ್ದರು. 2008 ರಲ್ಲಿ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದಾಗ, ಜಗದೀಶ್ ಶೆಟ್ಟರ್ ಅನಂತ್ ಕುಮಾರ್ ಕ್ಯಾಂಪ್ನಲ್ಲಿ ಇದ್ದರು. ಆಗ ಬೊಮ್ಮಾಯಿಗೆ ತನ್ನ ರಾಜಕೀಯ ಉಳಿವಿಗೆ ಸ್ಟ್ರಾಂಗ್ ನಾಯಕರ ಬೆಂಬಲ ಬೇಕಾಗಿತ್ತು.
ಹಾಗಾಗಿ ಅನಂತ್ ಕುಮಾರ್ (ಶೆಟ್ಟರ್) ವಿರೋಧಿ ಕ್ಯಾಂಪ್ನ ಬಿ.ಎಸ್. ಯಡಿಯೂರಪ್ಪ ಪರವಾಗಿ ಬೊಮ್ಮಾಯಿ ನೆಲೆ ಕಂಡುಕೊಂಡರು. ಆದರೆ 2012 ರಲ್ಲಿ ಬಿಎಸ್ವೈ ಕೆಜೆಪಿ ಕಟ್ಟಿದಾಗ ಬೊಮ್ಮಾಯಿ ಕೆಜೆಪಿ ಸೇರಲಿಲ್ಲ. ಮತ್ತೆ ಬಿಎಸ್ವೈ ಬಿಜೆಪಿಗೆ ಬಂದಾಗ ಬೊಮ್ಮಾಯಿ ಹತ್ತಿರವಾದರು.
ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಗಾದಿಯಿಂದ ಇಳಿದು ವಯಸ್ಸಿನಲ್ಲಿ ತನಗಿಂತ ಹಿರಿಯರಾದ ಬಿಎಸ್ವೈ ಸಂಪುಟ ಸೇರಿ ಬರೀ ಮಂತ್ರಿ ಆಗಿದ್ದರು. ಈಗ ತಮ್ಮೂರಿನವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ, ಹಿರಿಯ ಶೆಟ್ಟರ್ ಸಚಿವ ಸಂಪುಟವನ್ನು ಸೇರಲ್ಲ ಎಂದಿದ್ದಾರೆ.
ಆಡಳಿತದಲ್ಲಿನ ವಿಳಂಬ ಧೋರಣೆ ಕ್ಯಾನ್ಸರ್ ಇದ್ದಂತೆ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಕ್ಲೈಮ್ಯಾಕ್ಸ್‍ನಲ್ಲಿ ಈ ಇವರಿಬ್ಬರಿಗೂ ತಪ್ಪಿದ ಪಟ್ಟ ಲಾಬಿ ಮಾಡದ ಬೊಮ್ಮಾಯಿಗೆ ಒಲಿದ ಅದೃಷ್ಟ