ರಾಮನಗರ: ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸಿದೆ, ಈ ಸಿಂಡಿಕೇಟ್ ಸದಸ್ಯರುಗಳು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದರು.
ಕೆಲ ದಿನಗಳ ಹಿಂದೆ ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ, ಶನಿವಾರ ಕೂಡ ಚನ್ನಪಟ್ಟಣದ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೆರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಲ್ಲಿ ಸರ್ಕಾರ ನೇಮಿಸಿರುವ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಾರೆ ಎಂದು ಆರೋಪಿಸಿದರು.
40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಇವತ್ತಿನ ಆರ್‌ಎಸ್‌ಎಸ್ ಬೇರೆ. ವಿಜಯದಶಮಿಯ ದಿನದಂದು ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಒಂದು ಹೇಳಿಕೆ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್‌ಎಸ್‌ಎಸ್ ಸುಪರ್ದಿಗೆ ನೀಡಿ ಎಂದು. ಹಿಂದೂ ದೇವಾಲಯಗಳನ್ನು ಆರ್‌ಎಸ್‌ಎಸ್ನವರು ಗುತ್ತಿಗೆ ಹಾಕಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.
ಹಿಂದೆ ರಾಮಮಂದಿರ ನಿರ್ಮಾಣಕ್ಕೆ ಎಲ್.ಕೆ. ಅಡ್ವಾಣಿಯವರು ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು ಅದರ ಲೆಕ್ಕ ಇಲ್ಲ. ಮತ್ತೆ ಇದೀಗ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹ ಆಯ್ತು. ಇದರ ಹಣ ಎಲ್ಲಿ ಇಟ್ಟಿದ್ದಾರೆ ಯಾರು ಲೆಕ್ಕ ಕೊಡುತ್ತಾರೆ?
ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ. ಹಣದ ಲೆಕ್ಕವನ್ನು ಕೇಳುವುದಕ್ಕೆ ನೀವ್ಯಾರು ಅಂತ ಕೇಳುತ್ತಾರೆ. ರಾಮನ ಹೆಸರಿನಲ್ಲಿ ಹೇಗೆಲ್ಲಾ ಹಣದ ದುರುಪಯೋಗ ಆಗಿದೆ ಅನ್ನೋದನ್ನು ಹೇಳಿದ್ದೇನೆ ಎಂದರು.