ಬೆಂಗಳೂರು: ಪೆಟ್ರೋಲ್, ಡೀಸೆಲ್‌ಬೆಲೆ ಏರಿಕೆ ಹಾಗೂ ದವಸ ಧಾನ್ಯಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನತಾ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಅಚ್ಛೇ ದಿನ್ ಆಯೇಗಾ ಎಂದು ಜನ ಸಾಮಾನ್ಯರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ಕೋವಿಡ್ 19 ಸಂಕಷ್ಟ ಪರಿಸ್ಥಿತಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 108 ರೂಪಾಯಿ, ಡೀಸೆಲ್ ಲೀಟರ್ ಗೆ 95 ರೂಪಾಯಿ ಏರಿಕೆ ಮಾಡಿ ಜನ ಸಾಮಾನ್ಯನ ಬದುಕಿನ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದರು.
ತಿನ್ನುವ ಅನ್ನ ಅಡುಗೆ ಎಣ್ಣೆ ಲೀಟರ್ ಗೆ 100 ರೂಪಾಯಿಯಿಂದ ಇನ್ನೂರು ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಬೇಳೆ ಕಾಳು 70 ರೂ.ನಿಂದ 140 ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಎರಡು ತಿಂಗಳ ಲಾಕ್ ಡೌನ್ ನಿಂದ ಜರ್ಜರಿತಗೊಂಡಿರುವ ಜನರು ಚೇತರಿಸಿಕೊಳ್ಳುತ್ತಿರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡವನ ಹೊಟ್ಟೆ ಮೇಲೆ ಹೊಡೆದಂತೆ ಆಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲದಕ್ಕೂ ಗುಜರಾತ್ ಮಾಡೆಲ್ ಎನ್ನುವ ಬಿಜೆಪಿ ಸರ್ಕಾರ: ‘ಗುಜರಾತ್ ಮಾಡೆಲ್ ಎಲ್ಲಿದೆ? ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಎಲ್ಲ ಮಾಡಲಾಯ್ತು. ವ್ಯಾಪಾರಿಗಳು ಉದ್ಯಮಿಗಳ ಪರ ಅಂತಾ ಬಿಂಬಿಸಿಕೊಂಡ ಬಿಜೆಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡಲಿಲ್ಲಾ ಯಾಕೆ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ ಎಂದು ಪ್ರಶ್ನಿಸಿದರು.
ಸಾಂಪ್ರಾದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಗುವ ಬಗ್ಗೆ ಯಾವುದೇ ಸ್ಪಷ್ಟತೆ, ಭರವಸೆ ಇಲ್ಲ. ಆನ್ಲೈನ್ ನೋಂದಣಿ ಮಾಡಲು ಅವರಿಗೆ ಗೊತ್ತಿದ್ದರೆ, ಅವರು ಯಾಕೆ ಇವರ ಮುಂದೆ ಕೈಚಾಚುತ್ತಿದ್ದರು?
ಒಬ್ಬನೇ ಒಬ್ಬ ರೈತ, ಕಾರ್ಮಿಕ, ವೃತ್ತಿದಾರ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಆರಂಭದಲ್ಲಿ 25 ಲಕ್ಷ ಚಾಲಕರಿಗೆ ಪರಿಹಾರ ಕೊಡುತ್ತೇವೆ ಎಂದರು. ನಂತರ ಅದನ್ನು ಏಳೂವರೇ ಲಕ್ಷಕ್ಕೆ ಇಳಿಸಿದರು. ಈಗ ನೋಂದಣಿ ಸಮಸ್ಯೆಯಿಂದ ಕೇವಲ ಎರಡೂವರೆ ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.
ಎಲ್ಲ ಶ್ರಮಿಕ ವರ್ಗದವರಿಗೂ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಒದಗಿಸಬೇಕಿದೆ. ಬೆಂಗಳೂರು ನಗರದಲ್ಲಿ ಒಂದೂವರೇ ಕೋಟಿ ಜನಸಂಖ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಈ ವರ್ಗದವರ ಲೆಕ್ಕ ಬೇರೆ ಇದೆ ಎಂದು ಪಕ್ಷದ ನಗರ ಅಧ್ಯಕ್ಷ ಎನ್.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಂ. ಪಾಲಾಕ್ಷ, ಪಕ್ಷದ ಹಿರಿಯ ಮುಖಂಡರಾದ ಅಬ್ದುಲ್ ಬಶೀರ್ , ರಾಜ್ಯ ಉಪಾಧ್ಯಕ್ಷ ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃ ವೀರೇಶ್, ರಾಜ್ಯ ಯುವ ಘಟಕ ಅಧ್ಯಕ್ಷರಾದ ಭಾಸ್ಕರ್ , ರಾಜ್ಯ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಹುಸೇನ್ ಸಾಬ್ ಕೆರೂರು ಮತ್ತಿತರರು ಇದ್ದರು.