ಬೆಂಗಳೂರು: ಕರ್ನಾಟಕ ರಾಜ್ಯದ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೂ ಜೂನ್ ತಿಂಗಳ ವೇತನಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ.
ನಾಲ್ಕೂ ಸಂಸ್ಥೆಗಳ ಅಧಿಕಾರಿ/ ಸಿಬ್ಬಂದಿಗಳ ಜೂನ್ ವೇತನಕ್ಕಾಗಿ ಬಳಸಿಕೊಳ್ಳಲು ಜಿಡಿಎಫ್‌ಪಿ ಷರತ್ತು ಸಡಿಲಿಸಿ 2021-22 ನೇ ಸಾಲಿನ ಸಹಾಯಧನದಡಿ ಒದಗಿಸಿರುವ ಅನುದಾನದಡಿ 16,250 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.
ಅದರಲ್ಲಿ ಕೆಎಸ್ಆರ್ಟಿಸಿಗೆ 5,088 ಲಕ್ಷ ರೂ.ಗಳು, ಬಿಎಂಟಿಸಿ 4931 ಲಕ್ಷ ರೂ.ಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 3,321 ಲಕ್ಷ ರೂ.ಗಳು, ಎನ್‌ಇಕೆಆರ್‌ಟಿಸಿ ( ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ) 2910 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆ ಮೇರೆಗೆ ಸರ್ಕಾರ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಜೂನ್ ತಿಂಗಳ ವೇತನಕ್ಕಾಗಿ 162.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಂದರೆ ಜೂನ್ ತಿಂಗಳ ವೇತನಕ್ಕಾಗಿ ಶೇ.50ರಷ್ಟು ಬಿಡುಗಡೆ ಮಾಡಿದೆ. ಉಳಿದ ಶೇ.50ರಷ್ಟು ವೇತನವನ್ನು ಆಯಾಯ ಸಂಸ್ಥೆಗಳೇ ಭರಿಸಬೇಕೆ ಎಂಬುದರ ಬಗ್ಗೆ ಸ್ಪಷ್ಟ ಪಡಿಸಿಲ್ಲ.
ಇನ್ನು ಕಳೆದ ಏಪ್ರಿಲ್‌ನಲ್ಲಿ ಶೇ. 50ರಷ್ಟು ಮತ್ತು ಮೇ ತಿಂಗಳಿನಲ್ಲಿ ಶೇ. 75 ರಷ್ಟು ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿ 325 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು.
ಉಳಿದ ಏಪ್ರಿಲ್ ತಿಂಗಳ ಶೇ. 50 ಮತ್ತು ಮೇ ತಿಂಗಳ 25 ರಷ್ಟು ವೇತನವನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಬೇಕಿತ್ತು. ಪ್ರಸ್ತುತ ಜೂನ್ ತಿಂಗಳ ವೇತನದ ಶೇ.50ರಷ್ಟು ಬಿಡುಗಡೆ ಮಾಡಿರುವ ಸರ್ಕಾರ ಉಳಿದ ಶೇ.50 ರಷ್ಟು ವೇತನವನ್ನು ಆಯಾಯ ಸಂಸ್ಥೆಗಳು ಭರಿಸಬೇಕು ಎಂಬ ಲೆಕ್ಕಚಾರದಲ್ಲಿ ತಿಳಿಸಿದಂತೆ ಕಾಣುತ್ತಿದೆ.