ಬೆಂಗಳೂರು: ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಪ್ರಯಾಣಿಕರು ಬಸ್ಸಿನಲ್ಲೇ 50500 ರೂ. ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಬಿಟ್ಟು ಇಳಿದು ಹೋಗಿದ್ದರು. ನಂತರ ಆ ಕಳೆದು ಕೊಂಡಿದ್ದ ಹಣ ಮತ್ತು ಇತರೆ ವಸ್ತುವನ್ನು ಹುಡುಕಿಸಿ ಅವರಿಗೆ ತಲುಪಿಸುವ ಮೂಲಕ ಬೆಂಗಳೂರು ಮೈಸೂರು ರಸ್ತೆ ಮತ್ತು ಕೆಂಪೇಗೌಡ ಬಸ್ ನಿಲ್ದಾಣ ವಿಭಾಗ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇ ಗೌಡ ಪ್ರಾಮಾಣಿಕತೆ ಮೆರೆದಿದ್ದಾರೆ.
ಜುಲೈ 30 ರಂದು (ಶುಕ್ರವಾರ) ಸುಮಾರು ಬೆಳಗ್ಗೆ 10:35 ರಲ್ಲಿ ಇಬ್ಬರು ಪ್ರಯಾಣಿಕರು ವಾಹನ ಸಂಖ್ಯೆ KA11 F 0465 ರಲ್ಲಿ ಮಂಡ್ಯ ದಿಂದ ಬೆಂಗಳೂರಿಗೆ ಬಂದು ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಹೋಗಿದ್ದರು. ಈ ವೇಳೆ ತಾವು ತಂದಿದ್ದ 50500 ರೂ. ಮತ್ತುಆಸ್ಪತ್ರೆ ಸ್ಕ್ಯಾನಿಂಗ್ ರಿಪೋರ್ಟ್ ಮರೆತು ಬಸ್‌ನಲ್ಲೇ ಬಿಟ್ಟು ಇಳಿದಿದ್ದಾರೆ. ನಂತರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹೋಗಲು ಆಟೋ ಹತ್ತಿದ್ದಾರೆ.
ಈ ಇಬ್ಬರೂ ಬಸ್ ಅನ್ನು ಇಳಿದು ಆಟೋ ದಲ್ಲಿ ಹೋಗುವಾಗ ಮಾರ್ಗ ಮಧ್ಯೆ ತಮ್ಮ ಹಣ ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಕಳೆದುಹೋಗಿರುವುದು ನೆನಪಾಗಿ ಮರಳಿ ಅದೇ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ಬಂದು ಗೋಳಾಡುತ್ತಿದ್ದರು. ಸ್ಕ್ಯಾನಿಂಗ್ ರಿಪೋರ್ಟ್ ಮತ್ತು 50500 ರೂ. ಬಸ್ ನಲ್ಲಿ ಬಿಟ್ಟು ಹೋಗಿದ್ದೇವೆ ದಯಮಡಿ ಹುಡುಕಿಕೊಡಿ ಎಂದು ಗೊಗರೆಯುತ್ತಿದ್ದರು.
ಅದನ್ನು ಗಮನಿಸಿದ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇ ಗೌಡ ಅವರು ತಕ್ಷಣ ಸಂಬಂಧಪಟ್ಟ ಬಸ್ ಮಾಹಿತಿ ಪಡೆದು ಅದು ಯಾವ ಡಿಪೋಗೆ ಸೇರಿದ್ದು ಎಂಬುದನ್ನು ಟಿಕೆಟ್ ಮೂಲಕ ತಿಳಿದು ಕೊಂಡರು.
ಬಳಿಕ ಆ ತಕ್ಷಣವೇ ಮಂಡ್ಯ ಘಟಕದ ಬಸ್ ಎಂಬುವುದನ್ನು ಖಚಿತಪಡಿಸಿಕೊಂಡು ಮಂಡ್ಯ ಡಿಪೋ ವ್ಯವಸ್ಥಾಪಕ ರಘು ಅವರಿಗೆ ದೂರವಾಣಿ ಕರೆ ಮಾಡಿ ಬಸ್ ಚಾಲಕ ಮಹೇಶ್ ಹಾಗೂ ನಿರ್ವಾಹಕ ಸೋಮಶೇಖರಪ್ಪ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡರು.
ನಂತರ ಬಸ್ ನಿರ್ವಾಹಕ ಸೋಮಶೇಖರಪ್ಪ ಅವರಿಗೆ ಕರೆ ಮಾಡಿ ನಿಮ್ಮ ಬಸ್ಸಿನ 5 ನೆಯ ಸೀಟಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಗಳು ಮತ್ತು 50500 ರೂ. ಇರುವ ಒಂದು ಕವರ್ (ಬ್ಯಾಗ್) ಇದೆಯೇ ಎಂದು ಖಚಿಪಡಿಸುವಂತೆ ಹೇಳಿದರು. ಕೂಡಲೇ ಸೀಟ್ ಬಳಿಗೆ ಬಂದ ನಿರ್ವಾಹಕ ಸೋಮಶೇಖರಪ್ಪ ಹಣ ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಬಸ್‌ನಲ್ಲಿ ಇರುವುದನ್ನು ಖಚಿತಪಡಿಸಿದರು.
ನಂತರ ಅದನ್ನು ಚನ್ನಪಟ್ಟಣದ ಬಳಿ ಹೋಗುತ್ತಿದ್ದ ನಿರ್ವಾಹಕ ಸೋಮಶೇಖರಪ್ಪ ಅವರಿಗೆ ಘಟಕ ವ್ಯವಸ್ಥಾಪಕರಿಗೆ ತಲುಪಿಸುವಂತೆ ತಿಳಿಸಿದರು. ಅವರು ಹೇಳಿದಂತೆ ಸೋಮಶೇಖರಪ್ಪ ಮಾಡಿದರು. ನಂತರ ಆ ಹಣ ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಗಳನ್ನು ಮಂಡ್ಯದಲ್ಲಿ ಪ್ರಯಾಣಿಕರ ಮಗಳಿಗೆ ಕೊಡಿಸುವ ಕೆಲಸವನ್ನು ಮಂಡ್ಯ ಡಿಪೋ ವ್ಯವಸ್ಥಾಪಕ ರಘು ಅವರು ಮಾಡಿದ್ದಾರೆ. ಅವರ ಕಾರ್ತವ್ಯಕ್ಕೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಆಸ್ಪತ್ರೆಗೆ ಹೋಗಬೇಕಿದ್ದ ಆ ಪ್ರಯಾಣಿಕರು ಆಸ್ಪತ್ರೆಗೆ ತಲುಪಿದ್ದಾರೆ. ಇದಕ್ಕೂ ಮೊದಲು ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು. ಜತೆಗೆ ಮಂಡ್ಯದಲ್ಲಿ ಡಿಪೋ ವ್ಯವಸ್ಥಾಪಕರಾದ ರಘು ಅವರಿಗೆ ಪ್ರಯಾಣಿಕರ ಪುತ್ರಿ ಅಭಿನಂದನೆ ಸಲ್ಲಿಸಿದ್ದಾರೆ.