ಮಂಗಳೂರು: ಕೆಸ್ಸಾರ್ಟಿಸಿ ಮಂಗಳೂರು ವಿಭಾಗ 3ನೇ ಘಟಕದ ಚಾಲಕ ಕಂ ನಿರ್ವಾಹಕ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಮೂವರು ಮೇಲಧಿಕಾರಿಗಳ ವಿರುದ್ಧ ಐಪಿಸಿ ಸಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್‌ಐಆರ್ ದಾಖಲಾಗಿದೆ.
ಸೋಮವಾರ (ಸೆ.27) ನಿಂಗಪ್ಪ ಅವರು ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ಕೆಸ್ಸಾರ್ಟಿಸಿ ಡಿಸಿ ಅರುಣ್ ಕುಮಾರ್, ಡಿಟಿಒ ಕಮಲಾಕರ್ ಮತ್ತು ಟಿಸಿ ನಂದಕುಮಾರ್ ಅವರೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇನ್ನು ಈ ಸಂಬಂಧ ತನಿಖೆ ಮುಂದುವರಿಸಿರುವ ಉರ್ವಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಭಾರತಿ ಅವರು, ಈ ಮೂವರು ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಚಾಲಕ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪೊಲೀಸರು ಹೋದ ವೇಳೆ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಅಲ್ಲದೆ ಈ ಸಂಬಂಧ ಇನ್ನು ಆ ಬಾಡಿಗೆ ಮನೆಯಲ್ಲಿ ತಪಾಸಣೆ ನಡೆಸಬೇಕಿದೆ ಎಂದು ಇನ್ಸ್‌ಪೆಕ್ಟರ್ ಭಾರತಿ ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಕೆಎಸ್‌ಆರ್‌ಟಿಸಿ ನೌಕರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ಅವರ ಆತ್ಮಹತ್ಯೆಗೆ ಈ ಮೂವರು ಅಧಿಕಾರಿಗಳು ಕಾರಣ ಎಂಬ ಆರೋಪ ಕೇಳಿ ಬಂದಿರುವುದರಿಂದ ಸದ್ಯ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಈ ಮೂವರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಮೂವರು ಅಧಿಕಾರಿಗಳು ಅದೇ ವಿಭಾಗದಲ್ಲಿ ಕರ್ತವ್ಯ ಮುಂದುವರಿಸಿದರೆ ಪ್ರಕರಣ ಸಂಬಂಧ ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ಸಾಕ್ಷಿಗಳನ್ನು ಎದುರಿಸುವ ಕೆಲಸ ಮಾಡಬಹುದು. ಆದ್ದರಿಂದ ಈ ಮೂವರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಶಿವರಾಜ ಆಗ್ರಹಿಸಿದ್ದಾರೆ.
ಈ ಮೂವರು ಅಧಿಕಾರಿಗಳ ಜತೆಗೆ ಇನ್ನೂ ಐವರು ಅಧಿಕಾರಿಗಳು ಸೇರಿ ಕಿರುಕುಳ ನೀಡಿದ್ದರಿಂದ ಚಾಲಕ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಆತ್ಮಹತ್ಯೆಗೂ ಮುನ್ನ 8 ಮಂದಿ ಅಧಿಕಾರಿಗಳ ವಿರುದ್ಧ ನಿಂಗಪ್ಪ ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಡೆತ್‌ನೋಟ್ ಮಾತ್ರ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿಲ್ಲ.
ಹಾಗಾದರೆ ಆ ಡೆತ್‌ನೋಟ್ ಏನಾಯಿತು ಎಂಬ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಈ ಕ್ಲಿಷ್ಟಕರವಾದ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಬೇಧಿಸುವ ಮೂಲಕ ಮೃತ ನೌಕರನ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕಿದೆ.